ಪರಿಷತ್ ಚುನಾವಣೆ ಬಹುತೇಕ ಶಾಂತಿಯುತ

Update: 2018-06-08 16:08 GMT

ಬೆಂಗಳೂರು, ಜೂ.8: ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳ 6 ಸ್ಥಾನಕ್ಕೆ ನಡೆದ ಮತದಾನ ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ಪೂರ್ಣಗೊಂಡಿದೆ.

ದಕ್ಷಿಣ ಶಿಕ್ಷಣ ಕ್ಷೇತ್ರದಲ್ಲಿ ಶೇ.79.91, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.91.84, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 80.45 ಹಾಗೂ ನೈರುತ್ಯ ಪದವೀಧರರ ಕ್ಷೇತ್ರ 70.04, ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ 70.13, ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 64.11 ರಷ್ಟು ಮತದಾನವಾಗಿದೆ.

ರಾಯಚೂರಿನ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಪಂಚಾಯತ್ ಕಚೇರಿಯ ಕೋಣೆಯಲ್ಲಿ ಮತದಾನ ನಡೆಯುತ್ತಿದ್ದ ವೇಳೆ ಲಿಂಗಸಗೂರು ಶಾಸಕ ಡಿ.ಎಸ್.ಹೂಲಗೇರಿ ನೀತಿ ಸಂಹಿತೆ ಉಲ್ಲಂಘಿಸಿ ಪಟ್ಟಣ ಪಂಚಾಯತ್‌ಗೆ ನುಗ್ಗಿ ಸಭೆ ನಡೆಸಿದ್ದಾರೆ. ಈ ವೇಳೆ ಚುನಾವಣಾಧಿಕಾರಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಪೊಲೀಸರು ಅಲ್ಲಿಯೇ ಇದ್ದರೂ ಕ್ರಮ ಕೈಗೊಳ್ಳದಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದರ ಹೊರತು ಶಾಂತಿಯುತ ಮತದಾನ ನಡೆದಿದೆ.

ರಾಜ್ಯದ ವಿವಿಧೆಡೆ ಬೆಳಗ್ಗೆಯಿಂದ ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು ಮತದಾನ ಆರಂಭವಾದಾಗ ಕೆಲವೇ ಮತದಾರರು ಕಂಡುಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಲ್ಲಿ ಆತಂಕ ವ್ಯಕ್ತವಾಗಿತ್ತು. ಆದರೆ, ಮಧ್ಯಾಹ್ನದ ನಂತರ ಚುರುಕಿನಿಂದ ಸಾಗಿದ ಮತದಾನ ಸಂಜೆ ವೇಳೆಗೆ ಬಿರುಸು ಕಂಡಿತು. ಮತದಾರರು ಉದ್ದನೆಯ ಸಾಲಲ್ಲಿ ನಿಂತು ತಮ್ಮ ಹ್ಕಕು ಚಲಾಯಿಸಿದರು.

ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಹಾಗೂ ಪಕ್ಷೇತರರ ಬೆಂಬಲಿಗರು ತಮ್ಮ ಅಭ್ಯರ್ಥಿಯ ಪರವಾಗಿ ಮತದಾರರನ್ನು ಓಲೈಸಲು ತಂಡೋಪತಂಡವಾಗಿ ಮತಗಟ್ಟೆ ಬಳಿ ಜಮಾಯಿಸಿದ್ದು ಸಾಮಾನ್ಯವಾಗಿತ್ತು. ಮೂರು ಪಕ್ಷಗಳಿಗೆ ಚುನಾವಣೆಯು ಪ್ರತಿಷ್ಠೆಯ ಕಣವಾಗಿದ್ದು, ಹಾಲಿ ಸದಸ್ಯರಾದ ಜೆಡಿಎಸ್‌ನ ಮರಿತಿಬ್ಬೇಗೌಡ, ರಮೇಶ್‌ಬಾಬು ಮತ್ತು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಒಟ್ಟು 75 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರ ಒಲವು ಯಾರಿಗೆ ಎಂಬುದು ಜೂ.12 ರಂದು ಹೊರ ಬಿಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News