×
Ad

ತುಮಕೂರು: ಮಧುಗಿರಿ ತಾ.ಪಂ ಇಓ ಮಹಾಲಿಂಗಪ್ಪ ಅಮಾನತು

Update: 2018-06-08 22:48 IST

ತುಮಕೂರು,ಜೂ.08: ಮಧುಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಹೆಚ್.ಡಿ.ಮಹಾಲಿಂಗಯ್ಯ ಅವರನ್ನು ಕರ್ತವ್ಯ ನಿರ್ಲಕ್ಷದ ಆಧಾರದಲ್ಲಿ ಅವರ ವಿರುದ್ಧದ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಜಿಲ್ಲಾ ಪಂಚಾಯತ್ ಸಿಇಓ ಅನಿಸ್ ಕಣ್ಮಣಿ ಜಾಯ್ ಅಮಾನತ್ತುಗೊಳಿಸಿದ್ದಾರೆ.

ಕಳೆದ ಐದು ವರ್ಷಗಳಿಂದಲೂ ಮಧುಗಿರಿ ತಾಲೂಕು ಪಂಚಾಯತ್ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಡಿ.ಮಹಾಲಿಂಗಪ್ಪ ಅವರ ಮೇಲೆ ಸ್ವಚ್ಚ ಭಾರತ ಅಭಿಯಾನ, ಎಂಎನ್‍ಆರ್‍ಇಜಿಎ, ಜೀತದಾಳು ಪರಿಹಾರ ನಿಧಿ ಹಣ ದುಬರ್ಳಕೆ, ಜಿ.ಪಂ.ಸಾಮಾನ್ಯ ಮತ್ತು ಸ್ಥಾಯಿಸಮಿತಿ ಸಭೆಗಳಿಗೆ ಗೈರು, ಬರಪರಿಹಾರ ಸಭೆಗೆ ಗೈರು ಸೇರಿದಂತೆ ಹಲವು ಗುರುತರ ಆರೋಪಗಳು ಬಂದಿದ್ದವು. ಈ ಸಂಬಂಧ ವಿಚಾರಣೆ ಕೈಗೊಂಡಾಗ ಅವರ ಮೇಲಿರುವ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತು ಪಡಿಸಿ ಜೂನ್ 07 ರಂದು ಸಿಇಓ ಅವರು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಸ್ವಚ್ಚ ಭಾರತ ಅಭಿಯಾನದಲ್ಲಿ ಮಧುಗಿರಿ ತಾಲೂಕಿಗೆ 47,647 ವೈಯುಕ್ತಿಕ ಶೌಚಾಲಯ ನಿರ್ಮಾಣದ ಗುರಿಇದ್ದರೂ 42,084 ಶೌಚಾಲಯಗಳನ್ನು ನಿರ್ಮಿಸಿದ್ದು, 40 ಹಳ್ಳಿಗಳನ್ನು ಬಯಲು ಶೌಚಮುಕ್ತ ಗ್ರಾಮವಾಗಿ ಘೋಷಿಸುವ ಗುರಿ ಇದ್ದರೂ, ಇದುವರೆಗೂ ಕೇವಲ 17 ಗ್ರಾಮಗಳನ್ನು ಮಾತ್ರ ಹೆಸರಿಸಿದ್ದು, ಈ ಬಗ್ಗೆ ಗಮಹರಿಸುವಂತೆ ಹಲವಾರು ಬಾರಿ ಸೂಚನೆ ನೀಡಿದ್ದರೂ ನಿರ್ಲಕ್ಷ ತೋರಲಾಗಿದೆ. ಅಲ್ಲದೆ ಜೀತದಾಳು ವಿಮುಕ್ತಿಗೆ ನೀಡಿದ್ದ ಪರಿಹಾರದ ಹಣ ಹಂಚಿಕೆ ಯಲ್ಲಿಯೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಲೋಕಾಯುಕ್ತ ದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದುವರೆಗೆ ಶೇ 59.59ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, 3.20 ಲಕ್ಷ ಮಾನವ ದಿನಗಳ ಸೃಷ್ಟಿಗೆ ಅವಕಾಶವಿದ್ದರೂ ಕೇವಲ 44,279 ಮಾನವ ದಿನಗಳನ್ನು ಸೃಷ್ಟಿಸಿ ಕರ್ತವ್ಯ ನಿರ್ಲಕ್ಷ ತೋರಿದ್ದರು ಎಂದು ಆರೋಪಿಸಲಾಗಿದೆ. ಜಿ.ಪಂ.ಸಾಮಾನ್ಯ ಸಭೆ, ವಿವಿಧ ಸ್ಥಾಯಿ ಸಮಿತಿ ಸಭೆಗಳಿಗೆ ಗೈರು ಹಾಜರಾಗಿರುವ ಬಗ್ಗೆ ಇವರ ವಿರುದ್ದ ಕ್ರಮಕ್ಕೆ 2017ರ ಆಗಸ್ಟ್ 24 ರಂದು ನಿರ್ಣಯ ಕೈಗೊಳ್ಳಲಾಗಿತ್ತು.

ಈ ಎಲ್ಲಾ ಆರೋಪಗಳ ಕುರಿತು ವಿಚಾರಣೆ ನಡೆಸಿ ಸಿಇಓ ಅವರು ಹೆಚ್.ಡಿ.ಮಹಾಲಿಂಗಪ್ಪ ಅವರ ಮೇಲಿದ್ದ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಪಡಿಸಿ ಆದೇಶ ಹೊರಡಿಸಿದ್ದು, ಇಲಾಖೆಯ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಸದರಿಯವರ ಕಾರ್ಯವನ್ನು ಪಾವಗಡ ತಾ.ಪಂ.ಇಓ ಆನಂದಕುಮಾರ್ ಅವರಿಗೆ ವಹಿಸಿಸಲಾಗಿದೆ.

ಸದರಿ ಮಹಾಲಿಂಗಪ್ಪ 2008ರಲ್ಲಿ ಸುರೇಶಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೆಡಿಪಿ ಸಭೆಯಲ್ಲಿಯೇ ಆಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದು, ಛೀಮಾರಿಗೆ ಒಳಗಾಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News