ಹೆಚ್ಚು ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ವಿರುದ್ಧ ಪ್ರತಿಭಟನೆ: ರೈತ ಸಂಘದ ಮುಖಂಡ ಹಳೇಕೆರೆ ರಘು

Update: 2018-06-08 17:35 GMT

ಮೂಡಿಗೆರೆ, ಜೂ.8: ಖಾಸಗಿ ಶಾಲೆಗಳು ಪೋಷಕರನ್ನು ಸುಲಿಗೆ ಮಾಡುತ್ತಿವೆ ಎಂದು ರೈತ ಸಂಘದ ಮುಖಂಡ ರಘು ಹಳೇಕೆರೆ ಆರೋಪಿಸಿದರು.

ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಮಧ್ಯಮ ವರ್ಗದ ಕುಟುಂಬದವರೇ ಹೆಚ್ಚು. ಯಾವುದೇ ಮೂಲಸೌಕರ್ಯ ಇಲ್ಲದಿದ್ದರೂ ಸಹ ಖಾಸಗಿ ಶಾಲೆಗಳು ದುಬಾರಿ ಶುಲ್ಕ ಪಡೆಯುತ್ತಿವೆ. ಪುಸ್ತಕ ಹಾಗೂ ಯೂನಿಫಾರ್ಮ್ ವಿತರಣೆಯಲ್ಲಿ ಕಮೀಷನ್ ಪಡೆಯುತ್ತಿದ್ದಾರೆ. ಮಕ್ಕಳಿಗೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಖಾಸಗಿ ಶಾಲೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. 

ಹಸಿರು ಸೇನೆ ತಾಲೂಕು ಅಧ್ಯಕ್ಷ ಪುನೀತ್ ಪಟ್ಟದೂರು ಮಾತನಾಡಿ, ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗಿರುವ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ಪಡೆಯುತ್ತಿರುವುದು ಖಂಡನೀಯ. ಕುಟುಂಬದ ಆದಾಯದ ಅರ್ಧದಷ್ಟು ಆದಾಯ ಖಾಸಗಿ ಶಾಲೆಗಳ ಶುಲ್ಕಕ್ಕೇ ಕಟ್ಟುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು. 

ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮುರಳಿ ಬಿಳ್ಳೂರು ಮಾತನಾಡಿ, ಎಲ್‍ಕೆಜಿ ಮಕ್ಕಳಿಗೂ ಸಹ ಸಾವಿರರಾರು ರೂಪಾಯಿ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳಲ್ಲಿ ಶೌಚಾಯಗಳ ಶುಚಿತ್ವವೂ ಇಲ್ಲವಾಗಿವೆ. ಪೋಷಕರ ಸಭೆಯಲ್ಲಿ ಎಲ್ಲರನ್ನೂ ಒಂದೆಡೆ ಸೇರಿಸದೆ ಒಂದಷ್ಟೇ ಪೋಷಕರನ್ನು ಸೇರಿಸಿ ಸಭೆ ಮಾಡುವುದರಿಂದ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳದ ಪರಿಸ್ಥಿತಿ ಪೋಷಕರದ್ದಾಗಿದೆ ಎಂದರು. 

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ನಟೇಶ್ ಬಿ.ಹೊಸಳ್ಳಿ, ವನಶ್ರೀ, ಸುಧಾಕರ್, ಸವಿತಾ, ಸುರೇಶ್ ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News