ಚಿಕ್ಕಮಗಳೂರು: ಮಳೆಗಾಲದ ಅಣಬೆಗಳಿಗೆ ಭಾರೀ ಬೇಡಿಕೆ
ಚಿಕ್ಕಮಗಳೂರು, ಜೂ.8: ಮಲೆನಾಡಿನಲ್ಲೀಗ ಅಣಬೆ ಪ್ರಿಯರಿಗೆ ಸುಗ್ಗಿಕಾಲ. ಮಲೆನಾಡಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಎಲ್ಲೆಡೆ ವಿವಿಧ ಜಾತಿಯ ಅಣಬೆಗಳು ಅರಳಿ ನಿಲ್ಲುತ್ತವೆ. ಮಳೆಗಾಲದಲ್ಲಿ ಸಹಜವಾಗಿ ಕೆಲವೇ ತಿಂಗಳುಗಳ ಕಾಲ ಅರಳಿ ನಿಲ್ಲುವ ಈ ಅಣಬೆಗಳಿಗೆ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ಕೆಲ ಹಳ್ಳಿಗಾಡಿನ ಜನತೆ ಕಾಡುಮೇಡು ಅಲೆದು ಅಣಬೆಗಳನ್ನು ಕಿತ್ತುತಂದು ನಗರ ಪ್ರದೇಶಗಳ ಬೀದಿಗಳಲ್ಲಿ ಮಾರಾಟ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಇಂತಹ ಅಣಬೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಕಾಫಿನಾಡಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಇಲ್ಲಿನ ಕಾಫಿ, ಅಡಿಕೆ ತೋಟಗಳು, ಭತ್ತದ ಗದ್ದೆಗಳು, ಧಟ್ಟ ಕಾಡುಗಳಲ್ಲಿ ವಿವಿಧ ಜಾತಿಯ ಅಣಬೆಗಳು ಅರಳಿ ನಿಲ್ಲುತ್ತವೆ. ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಸತತ ಮಳೆಯಾಗುತ್ತಿರುವುದರಿಂದ ವಿವಿಧ ಜಾತಿಯ ಅಣಬೆಗಳು ಬೆಳೆದು ನಿಂತಿದ್ದು, ಗುಡುಗು, ಸಿಡಿಲು ಹಾಗೂ ಮಳೆಯಿಂದ ಭೂಮಿ ಮಿತವಾಗಿ ತೇವಾಂಶಗೊಂಡ ನಂತರ ಈ ಅಣಬೆಗಳು ಏಳುತ್ತವೆ. ಮಲೆನಾಡಿನಲ್ಲಿ ಕೆಲ ತಿಂಗಳುಗಳ ಕಾಲ ಇಂತಹ ವಿವಿಧ ಜಾತಿಯ ಅಣಬೆಗಳು ಅರಳುತ್ತವೆ. ಮಲೆನಾಡಿದ ಆದಿವಾಸಿಗಳಿಗೆ ಈ ಅಣಬೆಗಳೆಂದರೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಅಣಬೆಗಳು ಅರಳುವ ಕಾಲದಲ್ಲಿ ತಿಂಗಳಿಡೀ ಕಾಡುಮೇಡು ಅಲೆದು ಅಣಬೆಗಳನ್ನು ಸಂಗ್ರಹಿಸುವುದು ವಾಡಿಕೆ. ಆದಿವಾಸಿಗಳು ಕೆಲ ತಿಂಗಳುಗಳ ಕಾಲ ಅಣಬೆಗಳ ಖಾದ್ಯ ಮಾಡಿಯೇ ಜೀವನ ಸಾಗಿಸುತ್ತಾರೆ.
ಹೀಗೆ ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಬೆಳೆದು ನಿಲ್ಲುವ ವಿವಿಧ ಜಾತಿಯ ಅಣಬೆಗಳು ಚಿಕ್ಕಮಗಳೂರು ನಗರದ ರಸ್ತೆ ಬದಿಗಳಲ್ಲಿ ಮಾರಾಟಕ್ಕಿವೆ. ಈ ಅಣಬೆಗಳನ್ನು ಕೊಳ್ಳಲು ಅಣಬೆ ರುಚಿ ಬಲ್ಲವರು ಮುಗಿ ಬೀಳುತ್ತಿದ್ದಾರೆ. ಮಾರಾಟಗಾರರು ಕೆಲವೇ ಕೆಜಿ ಅಣಬೆಗಳನ್ನು ತಂದರೂ ಜೇಬು ತುಂಬ ಹಣ ಮಾಡಿಕೊಂಡು ಹೋಗುತ್ತಿದ್ದಾರೆ. ವಿವಿಧ ಜಾತಿಯ ಅಣಬೆಗಳು ರುಚಿಕರ ಖಾದ್ಯಕ್ಕೆ ಹೆಸರುವಾಸಿಯಾಗಿದ್ದು, ಒಂದು ಕೆ.ಜಿ.ಅಣಬೆ ಸುಮಾರು 550ರಿಂದ 600 ರೂ.ಗೆ ಬಿಕರಿಯಾಗುತ್ತಿವೆ.
ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಅಣಬೆಗಳಿಗೆ ನಗರ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಗ್ರಾಮೀಣ ಪ್ರದೇಶದಿಂದ ಅಣಬೆಗಳನ್ನು ತಂದು ನಗರದ ನಗರಸಭೆ ಮುಂಭಾಗದಲ್ಲಿ ಮಾರಾಟ ಮಾಡಲಾಗುತ್ತಿದೆ. ಜೂನ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರ ಅಣಬೆ, ಮಟ್ಟೆ ಅಣಬೆ, ಬೇರು ಅಣಬೆ, ಅಕ್ಕಿ ಅಣಬೆ, ದರಗಣಬೆ, ಕುಕ್ಕಡಿ ಅಣಬೆ, ಮೇಚಲಿ ಅಣಬೆ, ಹುಲ್ಲಣಬೆ, ಹೆಗ್ಗಲು ಅಣಬೆ ಬೆಳೆಯಲಿದ್ದು, ನಗರ ಪ್ರದೇಶಗಳಿಗೆ ತಂದು ಮಾರಾಟ ಮಾರಾಟ ಮಾಡಲಾಗುತ್ತಿದೆ. ವ್ಯಕ್ತಿಯೊಬ್ಬರು ಇಲ್ಲಿ ಪ್ರತಿದಿನ ನಗರಸಭೆ ಎದುರಿನ ಜಾಗದಲ್ಲಿ ಅಣಬೆಗಳನ್ನು ಗುಡ್ಡೆ ಹಾಕಿಕೊಂಡು ಮಾರುತ್ತಿದ್ದು, ನಾಗರಿಕರೂ ಈ ಅಣಬೆ ಕೊಳ್ಳಲು ಮುಗಿ ಬೀಳುತ್ತಿದ್ದಾರೆ.
ಅಪರೂಪದ ವರ್ಷಕ್ಕೆ ಒಮ್ಮೆ ದೊರಕುವ ಅಣಬೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಅಣಬೆಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವ ಕಾರಣಕ್ಕೆ ಅಣಬೆ ತಿನ್ನದವರು ಒಮ್ಮೆಯಾದರೂ ಇಂತಹ ಅಪರೂಪದ ಮಳೆಗಾಲದ ಅಣಬೆಗಳ ರುಚಿ ನೋಡಲು ಮುಂದಾಗುತ್ತಾರೆ. ಈ ಮಳೆಗಾಲದ ಅಣಬೆಗಳು ಸ್ವಚ್ಛತೆ ಇರುವ ಜಾಗದಲ್ಲೇ ಹೆಚ್ಚು ಬೆಳೆಯುವುದು ವಿಶೇಷವಾಗಿದ್ದು, ಮಲೆನಾಡಿನಲ್ಲಿ ಇದುವರೆಗೂ ಆದಿವಾಸಿಗಳು ಮಾತ್ರ ಚಪ್ಪರಿಸುತ್ತಿದ್ದ ಕಾಡು ಅಣಬೆಗಳ ರುಚಿ ಇತ್ತೀಚೆಗೆ ನಗರದ ಜನರನ್ನೂ ಸೆಳೆಯುತ್ತಿರುವುದರಿಂದ ಈ ಅಣಬೆಗಳಿಗೆ ಎಲ್ಲಿಲ್ಲದ ಬೇಡಿಕೆ ಬರಲು ಕಾರಣವಾಗಿದೆ. ಅಣಬೆಗಳ ರುಚಿಯಿಂದಾಗಿ ಇತ್ತೀಚೆಗೆ ಅಣಬೆ ಕೃಷಿ ಎಲ್ಲೆಡೆ ಹೆಚ್ಚುತ್ತಿದೆ. ಆದರೆ ಮಳೆಗಾಲದ ಆರಂಭದ ದಿನಗಳಲ್ಲಿ ಮಾತ್ರ ಸಹಜವಾಗಿ ಬೆಳೆಯುವ ಕಾಡು ಜಾತಿಯ ಅಣಬೆಗಳ ರುಚಿಗೆ ಹೋಲಿಸಿದರೆ ಕೃಷಿ ಮಾಡಿದ ಅಣಬೆ ರುಚಿ ಏನೂ ಅಲ್ಲ. ಈ ಕಾರಣಕ್ಕೆ ಸಹಜವಾಗಿ ಬೆಳೆಯುವ ಅಣಬೆಗಳಿಗೆ ಬೇಡಿಕೆ ಹೆಚ್ಚಿದ್ದು, ಮಾರಾಟಗಾರರು ಹೆಚ್ಚುತ್ತಿದ್ದಾರೆ. ಹೀಗೆ ಸಹಜವಾಗಿ ಬೆಳೆಯುವ ಅಣಬೆಗಳ ಕೃಷಿ ಸಾಧ್ಯವಿಲ್ಲ ಎನ್ನುವುದು ಈ ಅಣಬೆಗಳ ವಿಶೇಷವಾಗಿದೆ.
ಜೂನ್ ತಿಂಗಳಲ್ಲಿ ಅಣಬೆಗಳು ಅರಣ್ಯ ಪ್ರದೇಶದಲ್ಲಿ ಏಳುತ್ತವೆ. ಶುಕ್ರವಾರ ಇಬ್ಬರು ಅಣಬೆ ಕೀಳಲು ಹೋಗಿದ್ದು, ಆರು ಕೆ.ಜಿ.ಯಷ್ಟು ಅಣಬೆ ತಂದು ಮಾರಾಟ ಮಾಡಿದ್ದೇವೆ. ವರ್ಷಕ್ಕೊಮ್ಮೆ ಸಿಗುವ ಅಣಬೆಪಡೆಯಲು ನಗರ ಪ್ರದೇಶದ ಜನರು ಹೆಚ್ಚು ಆಸಕ್ತರಾಗಿರುತ್ತಾರೆ. ಗುಡುಗು, ಮಿಂಚು, ಹದವಾದ ಮಳೆಯಾಗುತ್ತಿದ್ದಂತೆ ಅಣಬೆ ಅರಳುತ್ತವೇ. ಅಣಬೆ ಖಾದ್ಯ ಅತ್ಯಂತ ರುಚಿಕರವಾಗಿದ್ದು, ಹೆಚ್ಚಿನ ಜನರು ತಗೆದುಕೊಳ್ಳುತ್ತಾರೆ. ಲಾಭವೂ ಹೆಚ್ಚಿರುತ್ತದೆ.
-ಸೈಯದ್ ವಾಲಿ, ಆದಿಶಕ್ತಿನಗರ ನಿವಾಸಿ.