ಚಿಕ್ಕಮಗಳೂರು: ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು
ಚಿಕ್ಕಮಗಳೂರು, ಜೂ.8: ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ತಂಡವೊಂದು ಆನೆ ದಾಳಿಯಿಂದ ಪಾರಾಗಿ ಪ್ರಾಣ ಉಳಿಸಿಕೊಂಡಿರುವ ಘಟನೆ ಇತ್ತೀಚೆಗೆ ಇಲ್ಲಿನ ಭದ್ರ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಅರಣ್ಯ ವಲಯದಲ್ಲಿ ವರದಿಯಾಗಿದೆ.
ಬೆಂಗಳೂರು ಮೂಲದ ಕೆಲ ಪ್ರವಾಸಿಗರು ಕಳೆದ ಮೂರು ದಿನಗಳ ಹಿಂದೆ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಮತ್ತೋಡಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಉದ್ಯಾನವನ ಸುತ್ತಲು ತೆರಳಿದ್ದು, ದಾರಿ ಮಧ್ಯೆ ಕೆರೆಯೊಂದರಲ್ಲಿ ನಾಲ್ಕು ಮರಿಗಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಒಂದು ಗಂಡು, ಒಂದು ಹೆಣ್ಣು ಆನೆಗಳು ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಇದನ್ನು ಕಂಡ ಪ್ರವಾಸಿಗರು ವಾಹದಿಂದ ಇಳಿಯದೇ ವಾಹದಲ್ಲೇ ಕುಳಿತು ಮೊಬೈಲ್‍ನಲ್ಲಿ ಆನೆಗಳ ವಿಡಿಯೋ ಸೆರೆ ಹಿಡಿಯಲು ಮುಂದಾಗಿದ್ದಾರೆನ್ನಲಾಗಿದೆ.
ಪ್ರವಾಸಿಗರನ್ನು ನೋಡಿದ ಆನೆಗಳು ವಿಚಲಿತಗೊಂಡು ನೀರಿನಿಂದ ಒಂದೊಂದಾಗಿ ಮೇಲಕ್ಕೆ ಬಂದಿದ್ದು, ಮೊದಲು ಗಂಡಾನೆ ನೀರಿನಿಂದ ಮೇಲೆ ಬಂದು ಕಾಡಿನೊಳಗೆ ಮರೆಯಾದ ಬಳಿಕ ಮರಿಗಳೊಂದಿಗೆ ನೀರಿನಿಂದ ಕೆರೆಯ ದಡಕ್ಕೇರಿದ ಹೆಣ್ಣಾನೆ ಪ್ರವಾಸಿಗರನ್ನು ಕಂಡಿದ್ದೇ ಏಕಾಏಕಿ ಸಫಾರಿ ವಾಹನದತ್ತ ನುಗ್ಗಿದೆ. ಆನೆ ಇನ್ನೇನು ವಾಹನದ ಮೇಲೆ ದಾಳಿ ಮಾಡಲಿದೆ ಎಂಬಷ್ಟರಲ್ಲಿ ಇದನ್ನು ಗಮನಿಸಿದ ಪ್ರವಾಸಿಗರು ಕೂಡಲೇ ವಾಹನವನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿ ಕೂದಲೆಳೆಯ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಪ್ರವಾಸಿಗರು ವಾಹನದಿಂದ ಕೆಳಗಿಳಿದು ವಿಡಿಯೊ ಮಾಡುವಲ್ಲಿ ಮಗ್ನರಾಗಿದ್ದಲ್ಲಿ ಏಕಾಏಕಿ ನುಗ್ಗಿದ ಹೆಣ್ಣಾನೆಯ ದಾಳಿಯಿಂದಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತೆನ್ನಲಾಗಿದೆ. ಸದ್ಯ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾದ ಈ ವಿಡಿಯೊ ದೃಶ್ಯ ಜಿಲ್ಲೆಯಾದ್ಯಂತ ಎಲ್ಲರ ಮೊಬೈಲ್‍ಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ.