ಹೊನ್ನಾವರ: ಮುಂದುವರಿದ ವರುಣನ ಆರ್ಭಟ; ಅಪಾರ ಹಾನಿ

Update: 2018-06-09 16:53 GMT

ಹೊನ್ನಾವರ,ಜೂ.09: ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಶನಿವಾರವೂ ಧಾರಾಕಾರ ಮಳೆಯಾಗಿ ಕೆಲ ಮನೆಗಳಿಗೆ ಹಾನಿ ಉಂಟಾಗಿದೆ.

ತಾಲೂಕಿನಲ್ಲಿ 167.2 ಮಿ.ಮೀ ಮಳೆಯಾಗಿದ್ದು, ಶುಕ್ರವಾರ ರಾತ್ರಿ ಅಬ್ಬರಿಸಿದ ಮಳೆ ಶನಿವಾರ ಸಂಜೆಯವರೆಗೂ ಸುರಿದಿದೆ. ಅತಿ ಹೆಚ್ಚು ಮಳೆಯಾಗಿರುವುದರಿಂದ ಹಳದೀಪುರದ ಸಾಲಿಕೇರಿಯಲ್ಲಿ ದೇವಿ ಅವರ ಮನೆಯೊಳಗೆ ನೀರು ನುಗ್ಗಿ ಮನೆಯ ಪೀಠೋಪಕರಣಗಳು, ನೀರಿಗೆ ಸಿಲುಕಿ ಹಾಳಾಗಿವೆ. ನವಿಲಗೋಣದಲ್ಲಿ ವಿಘ್ನೇಶ್ವರ ರಾಮಚಂದ್ರ ಭಟ್ಟ ಎಂಬುವವರ ಕೊಟ್ಟಿಗೆಯ ಮೇಲೆ ತೆಂಗಿನ ಮರ ಬಿದ್ದು 40 ಸಾವಿರ ರೂ. ನಷ್ಟವಾಗಿದೆ. ಕಡ್ಲೆ ಗ್ರಾ.ಪಂ ವ್ಯಾಪ್ತಿಯ ನೀಲಕೋಡದಲ್ಲಿ ಶಂಕರ ನಾಗಪ್ಪ ಜೋಗಿ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು 60 ಸಾವಿರ ರೂ. ಹಾನಿ ಸಂಭವಿಸಿದೆ ಎನ್ನಲಾಗಿದೆ. 

ಬಂಡೆಗಲ್ಲು ಕುಸಿತ: ನವಿಲಗೋಣದ ಚಿಪ್ಪಿಹಕ್ಕಲದಲ್ಲಿ ಗುಡ್ಡ ಕುಸಿತವುಂಟಾಗಿ ಬೃಹದಾಕಾರದ ಬಂಡೆಗಲ್ಲು ನಡು ರಸ್ತೆಯಲ್ಲಿ ಬಿದ್ದಿರುವುದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಂತರ ಅಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಹೊನ್ನಾವರ ಪಿಎಸ್‍ಐ ರವಿ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News