×
Ad

ಕಳಸ: ಮನೆ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Update: 2018-06-09 22:49 IST

ಕಳಸ,ಜೂ.09: ಇಲ್ಲಿಗೆ ಸಮೀಪದ ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಗ್ಗನಳ್ಳ ಗ್ರಾಮದ ಪಡೀಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ಮನೆಯೊಂದರ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಐದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರಸಾದ್, ಪವಿತ್ರಾ ಹಾಗೂ ಐದು ವರ್ಷದ ಬಾಲಕಿ ಪ್ರಜ್ಞಾ ಗಾಯಗೊಂಡ ಒಂದೇ ಕುಟುಂಬದ ಸದಸ್ಯರಾಗಿದ್ದು, ಕಳಸ ಹೋಬಳಿಯಾದ್ಯಂತ ಶುಕ್ರವಾರ ಬೆಳಗ್ಗೆಯಿಂದಲೇ ಭಾರೀ ಮಳೆಸುರಿದಿದೆ.

ಈ ಮಳೆ ಮಧ್ಯರಾತ್ರಿ ಬಿರುಸುಗೊಂಡಿದ್ದು, ಗಾಳಿ ಸಹಿತ ಸುರಿದ ಮಳೆಗೆ ಪ್ರಸಾದ್ ಅವರ ಮನೆಯ ಪಕ್ಕದಲ್ಲೇ ಇದ್ದ ಭಾರೀ ಗಾತ್ರದ ಮರ ಮಧ್ಯರಾತ್ರಿ ವೇಳೆ ಮನೆಯ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಪ್ರಸಾದ್, ಪವಿತ್ರಾ ಹಾಗೂ ಪ್ರಜ್ಞಾ ಗಾಯಗೊಂಡು ಮರದಡಿಯಲ್ಲಿ ಸಿಲುಕಿದ್ದಾರೆನ್ನಲಾಗಿದೆ. ಮರ ಬಿದ್ದ ಸದ್ದಿಗೆ ಅಕ್ಕಪಕ್ಕದ ಮನೆ ಅವರು ಬಂದು ನೋಡಿದಾಗ ಪ್ರಸಾದ್ ಅವರ ಮನೆ ಸಂಪೂರ್ಣವಾಗಿ ಜಖಂಗೊಂಡಿರುವುದು ಕಂಡಿದೆ. ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು ಮರದಡಿಯಲ್ಲಿ ಸಿಲುಕಿಕೊಂಡಿರುವ ರಕ್ಷಿಸಿದ್ದಾರೆ. ಬಾಲಕಿಯ ಕೈ ಮುರಿದದ್ದರಿಂದ ಪ್ರಜ್ಞಾಹೀನ ಸ್ಥಿತಿಯಲಿದ್ದು, ನಂತರ ಮೂವರನ್ನು ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಕಳಸ ನಾಡ ಕಚೇರಿಯ ರೆವಿನ್ಯೂ ಇನ್‌ಸ್ಪೆಕ್ಟರ್ ರತ್ನಾಕರ್, ವಿಎ ಕವನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News