ಮಡಿಕೇರಿ: ಮಾಲು ಸಹಿತ ಬಂದೂಕು ಚೋರನ ಬಂಧನ
Update: 2018-06-09 23:02 IST
ಮಡಿಕೇರಿ, ಜೂ.9: ಕೆ.ನಿಡುಗಣೆ ಗ್ರಾಮದಲ್ಲಿ ಕಳ್ಳತನವಾಗಿದ್ದ ಬಂದೂಕು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಪರಾಧ ಪತ್ತೆ ದಳದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆ.ನಿಡುಗಣೆ ಗ್ರಾಮದ ನಿವಾಸಿ ಈರಪ್ಪ ಎಂಬುವವರ ಮನೆಯಿಂದ ಮಾರ್ಚ್ ತಿಂಗಳಿನಲ್ಲಿ ಬಂದೂಕು ಕಳ್ಳತನವಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯನ್ವಯ ಕಾಕೋಟು ಪರಂಬು ನಿವಾಸಿ ಎಂ.ಎಂ.ದರ್ಶನ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬಂದೂಕು ಕದ್ದಿರುವುದು ಖಚಿತವಾಗಿದೆ. ಈತ ವಿರಾಜಪೇಟೆಯಲ್ಲಿ ನಡೆದ ದರೋಡೆ ಪ್ರಕರಣವೊಂದರ ಆರೋಪಿಯಾಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಅವರ ನಿರ್ದೇಶನದಂತೆ ಡಿವೈಎಸ್‍ಪಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಪರಾಧ ಪತ್ತೆ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.