ಮೂಢ ನಂಬಿಕೆಗಳ ಮೂಟೆ ಹೊತ್ತಿರುವ ರಾಜಕಾರಣಿಗಳನ್ನು ಸರಿಪಡಿಸಬೇಕಾಗಿದೆ: ಕತೆಗಾರ ಡಾ.ಮೊಗಳ್ಳಿ ಗಣೇಶ್
ಮಂಡ್ಯ, ಜೂ.9: ಪ್ರಜಾಪ್ರಭುತ್ವದ ದೇವಾಲಯಗಳಲ್ಲಿ(ಲೋಕಸಭೆ, ವಿಧಾನಸಭೆ) ಮೂಢ ನಂಬಿಕೆಗಳ ಮೂಟೆ ಹೊತ್ತುಕೊಂಡಿರುವ ರಾಜಕಾರಣಿಗಳನ್ನು, ಸರಕಾರಿ ವ್ಯವಸ್ಥೆಯನ್ನು ನಾವು ಸರಿಪಡಿಸಬೇಕಾಗಿದೆ ಎಂದು ಖ್ಯಾತ ಕತೆಗಾರ ಡಾ.ಮೊಗಳ್ಳಿ ಗಣೇಶ್ ಕರೆ ನೀಡಿದ್ದಾರೆ.
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕೊಡಮಾಡುವ 2017ರ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯನ್ನು ಶನಿವಾರ ಸ್ವೀಕರಿಸಿ ಮಾತನಾಡಿದ ಅವರು, ನಾವು ಯಾವುದು ಕತ್ತಲು ಎಂದು ಒಪ್ಪಿಕೊಂಡಿದ್ದೇವೆಯೋ ಆ ಕತ್ತಲಲ್ಲಿ ಬೆಳಗೋ ರೀತಿಯಲ್ಲಿ ವರ್ತಿಸುತ್ತಿರುವ ಜನಪ್ರತಿನಿಧಿಗಳನ್ನು ಮನುಷ್ಯತ್ವದ ಕಡೆಗೆ ತರುವುದು ಹೇಗೆ? ಎಂಬುದರ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು.
ಇವತ್ತು ನಾವು ಯಾವುದನ್ನು ಮತ, ಮೌಢ್ಯಗಳೆಂದು, ಕಂದಾಚಾರವೆಂದು ಕರೆಯುತ್ತೇವೆಯೋ, ಅದನ್ನು ತಲೆಯ ಮೇಲೆ ಹೊತ್ತುಕೊಂಡು, ಹೊಟ್ಟೆ ತುಂಬಾ ತುಂಬಿಕೊಂಡು, ಎದೆ ಮೇಲೆ ಹಾಕ್ಕೊಂಡು ಒಂದು ರಾಜಕೀಯ ವ್ಯವಸ್ಥೆಯನ್ನು ಹೇಸಿಗೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಡಪಾಯಿಗಳಿಗೆ, ದಿಕ್ಕೆಟ್ಟವರಿಗೆ ಸಿಗಬೇಕಾದ ನಿಜವಾದ ಪ್ರಜಾಪ್ರಭುತ್ವದ ನ್ಯಾಯವನ್ನು ಹೇಗೆ ಕೊಡಿಸುವುದು? ಮನುಷ್ಯನ ಅಂತಃಕರಣವನ್ನು ಮತ್ತೆ ಬೆಳಗಿಸುವುದು ಹೇಗೆ? ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹೋರಾಟಗಾರರು, ಪ್ರಜ್ಞಾವಂತ ಸಮಾಜ, ಮನುಷ್ಯತ್ವದ ಕನಸನ್ನು ಉಳಿಸಿಕೊಂಡಿರುವವರು ಈ ಕತ್ತಲಿನ ವಿರುದ್ಧವಾಗಿ ಸಾಹಿತ್ಯ ಸಂವೇದನೆಯ ಹಣತೆಯನ್ನು ಸದಾ ಬೆಳಗಿಸಬೇಕಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ರಾಮಣ್ಣನವರ ಕತೆಗಳ ಕೊಂಡಿ ನಾನು. ದಿಕ್ಕೆಟ್ಟ ತಾಯಂದಿರು, ಅನಾಥ ಮಕ್ಕಳು, ಅನಾಥ ಸಮಾಜ, ಮನುಷ್ಯತ್ವವೇ ಇಲ್ಲದೆ ಕ್ರೂರವಾದ ಜಗತ್ತಿನಲ್ಲಿ ಕಳೆದುಹೋಗಿರುವ ಮನುಷ್ಯನನ್ನು ಹುಡುಕುವ ರಾಮಣ್ಣನವರ ಕತೆಗಳಿಗೂ ನನ್ನ ಕತೆಗಳಿಗೂ ಯಾವ ವ್ಯತ್ಯಾಸವಿಲ್ಲ ಎಂದು ಗಣೇಶ್ ಅಭಿಪ್ರಾಯಪಟ್ಟರು.
ಒಂದೇ ಬಳ್ಳಿಯ, ಒಂದೇ ತಾಯಿಯ ಮಕ್ಕಳು ಹೇಗೋ ಹಾಗೆ ನನ್ನ ಮತ್ತು ರಾಮಣ್ಣ ಅವರ ಕತೆಗಳು. ಆ ರೀತಿಯ ಕಥಾ ಪರಂಪರೆಯಬ್ಬಯ ಕೊಂಡಿಯನ್ನು ಹಾಗೆಯೇ ವಿಸ್ತರಿಸಬಹುದು. ಕನ್ನಡ ಕಥಾ ಸಾಹಿತ್ಯದಲ್ಲಿ ಇಂತಹ ಒಂದು ಪರಂಪರೆಯೇ ಇದೆ. ಆ ಪರಂಪರೆಯಲ್ಲಿ ಜತೆಗೆ ನಾನು ಬಂದಿದ್ದೇನೆ ಎಂದು ಅವರು ಹೇಳಿದರು.
‘ದೇವರ ದಾರಿ’ ಕೃತಿಗಾಗಿ ಡಾ.ಮೊಗಳ್ಳಿ ಗಣೇಶ್ ಅವರಿಗೆ ಸುಪ್ರಸಿದ್ದ ಕವಿ, ಜೆಎನ್‍ಯು ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಶಿವಪ್ರಕಾಶ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕ, ಪತ್ರ ಒಳಗೊಂಡಿದೆ.
ಪ್ರಸಿದ್ಧ ವಿಮರ್ಶಕಿ ಡಾ.ವಿನಯಾ ವಕ್ಕುಂದ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಕತೆಗಳ ಕುರಿತು ಹಾಗೂ ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಸ್.ರಘುನಾಥ್ ಪ್ರಶಸ್ತಿ ಪಡೆದ ಕೃತಿ ದೇವರ ದಾರಿ ಕುರಿತು ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಜೀವ ಪೋಷಕರಾದ ಡಿ.ಪಿ.ರಾಜಮ್ಮ ರಾಮಣ್ಣ, ರಾಮಣ್ಣ ಪುತ್ರ ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ, ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಮಳವಳ್ಳಿ ತಾಲೂಕು ದಾಸನದೊಡ್ಡಿಯ ಪರಿಸರ ಪ್ರೇಮಿ ಕಾಮೇಗೌಡ ಅವರಿಗೆ ಪ್ರತಿಷ್ಠಾನದ ವತಿಯಿಂದ 10 ಸಾವಿರ ರೂ. ನಗದು ಒಳಗೊಂಡ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು.
ಕುವೆಂಪು ಅವರು ಸಾರಿದ ವೈಚಾರಿಕ ಕ್ರಾಂತಿಯ ಬೆಳಗನ್ನು ಕಾಪಾಡಿಕೊಂಡು ಬಂದಿದ್ದೇವೆ. ಆ ಟಾರ್ಚನ್ನು ಯಾವುದೇ ಕಾರಣಕ್ಕೂ ಕೆಳಗಿಟ್ಟಿಲ್ಲ, ಇಡುವುದೂ ಇಲ್ಲ. ಅದು ಸದಾ ಜಗತ್ತಿಗೆ ಬೇಕಾದ ಟಾರ್ಚ್.
-ಡಾ.ಮೊಗಳ್ಳಿ ಗಣೇಶ್.