×
Ad

ಮಡಿಕೇರಿ: ಅಕ್ರಮ ಮರಳು ಸಾಗಾಟ; ಮೂರು ವಾಹನಗಳ ವಶ

Update: 2018-06-10 23:07 IST

ಮಡಿಕೇರಿ, ಜೂ.10: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಹಾಗೂ ಕಳವು ಮಾಡಿ ಶೇಖರಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊನ್ನಂಪೇಟೆ ಪೊಲೀಸರು ಪತ್ತೆ ಹಚ್ಚಿ ಮರಳು ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆಯ ದಡದಲ್ಲಿ ಜೂ.6ರಂದು ರವಿ ಮತ್ತು ಭಜನ್ ದೇವಯ್ಯ ಎಂಬವರು ಜೆ.ಸಿ.ಬಿ ಯಂತ್ರದ ಸಹಾಯದಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಟ್ರ್ಯಾಕ್ಟರ್ ಗೆ ಲೋಡ್ ಮಾಡಿ ಸರಕಾರದ ಪರವಾನಿಗೆ ಇಲ್ಲದೆ  ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದರೆನ್ನಲಾಗಿದೆ. ಈ ಸಂದರ್ಭ ದಾಳಿ ನಡೆಸಿದ ಪೊನ್ನಂಪೇಟೆ ಪೊಲೀಸರು ಮರಳು ಹಾಗೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲಿ  ಪ್ರಕರಣ ದಾಖಲಿಸಲಾಗಿದೆ.    

ಮರಳು ಕಳವು: ಮತ್ತೊಂದು ಪ್ರಕರಣದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ಹೊಳೆಯ ದಡದಲ್ಲಿ  ಚೆರಿಯಂಡ ರೋಷನ್ ಎಂಬವರು ಜೂ.8ರಂದು ಅಕ್ರಮವಾಗಿ ಮರಳನ್ನು ಕಳವು ಮಾಡಿ ಸರಕಾರದ ಪರವಾನಿಗೆ ಇಲ್ಲದೆ ಶೇಖರಿಸಿಟ್ಟಿರುವುದಾಗಿ ದೊರೆತ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಪಿಎಸ್‍ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಅಕ್ರಮವಾಗಿ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಒಂದು ಕಬ್ಬಿಣದ ತೆಪ್ಪ ಹಾಗೂ ಮರಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ರೋಷನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.    

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ ಅವರ ಮಾರ್ಗದರ್ಶನದ ಮೇರೆಗೆ ಗೋಣಿಕೊಪ್ಪ ವೃತ್ತದ ವೃತ್ತ ನಿರೀಕ್ಷಕ ಕೆ.ಪಿ. ಹರಿಶ್ಚಂದ್ರ  ಹಾಗೂ ಪೊನ್ನಂಪೇಟೆ ಠಾಣೆಯ ಪಿಎಸ್‍ಐ ಬಿ.ಜಿ.ಮಹೇಶ್ ಅವರು ಸಿಬ್ಬಂದಿಯವರೊಂದಿಗೆ ಕಾರ್ಯಾಚರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ.ಬಿ ಯಂತ್ರ ಹಾಗೂ ಮರಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಮಾಹಿತಿ ನೀಡಲು ಮನವಿ
ಕೊಡಗು ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳೇ ಅಲ್ಲದೆ ಯಾವುದೇ ಹೊಳೆಯ ದಡಗಳಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಸಾರ್ವಜನಿಕರು ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರ  - 08272 - 228330, ಡಿವೈಎಸ್‍ಪಿ, ಮಡಿಕೇರಿ ಉಪ ವಿಭಾಗ  - 9480804920, ಡಿವೈಎಸ್‍ಪಿ, ಸೋಮವಾರಪೇಟೆ ಉಪ ವಿಭಾಗ - 9480804921, ಡಿವೈಎಸ್‍ಪಿ, ವೀರಾಜಪೇಟೆ ಉಪ ವಿಭಾಗ - 9480804922 ಅಥವಾ ಪೊಲೀಸ್ ನಿರೀಕ್ಷಕರು, ಡಿಸಿಐಬಿ ವಿಭಾಗ - 9480804908 ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News