ದಲಿತ ಹೋರಾಟಗಾರರಿಗೆ ನಕ್ಸಲರ ಪಟ್ಟ!

Update: 2018-06-11 05:17 GMT

ಉನಾ ಚಳವಳಿ ಮತ್ತು ಕಳೆದ ವರ್ಷದ ಕೋರೆಗಾಂವ್ ಪ್ರಕರಣದ ಬಳಿಕ ದಲಿತ ಚಳವಳಿಯನ್ನು ಮಟ್ಟ ಹಾಕಲು ಸರಕಾರ ವ್ಯವಸ್ಥಿತವಾಗಿ ಇಳಿದಂತಿದೆ. ದೇಶಾದ್ಯಂತ ದಲಿತ ಹೋರಾಟಗಳು ರಾಜಕೀಯ ಶಕ್ತಿಯಾಗಿ ಬದಲಾಗುತ್ತಿರುವುದು ರಾಜಕೀಯ ನಾಯಕರಿಗೆ ಆತಂಕ ತಂದಿದೆ. ಉನಾದಲ್ಲಿ ದಲಿತರ ಹೋರಾಟ ಅಂತಿಮವಾಗಿ ಜಿಗ್ನೇಶ್ ಮೇವಾನಿಯನ್ನು ಶಾಸಕನನ್ನಾಗಿಸಿತು. ಮೇಲ್ವರ್ಗದ ಜನರಿಗೆ ಇದೊಂದು ಎಚ್ಚರಿಕೆಯ ಗಂಟೆಯಂತೆ ಅನ್ನಿಸಿದೆ. ಇದೇ ಹಿನ್ನೆಲೆಯಲ್ಲಿ, ದಲಿತ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ದಲಿತರು ಬೀದಿಗಿಳಿದಾಗ, ಪೊಲೀಸ್ ವ್ಯವಸ್ಥೆ ಮತ್ತು ಮೇಲ್ಜಾತಿಯ ಗೂಂಡಾಗಳು ಜೊತೆ ಸೇರಿ ಅದನ್ನು ದಮನಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಸುಮಾರು 10ಕ್ಕೂ ಅಧಿಕ ದಲಿತರು ಗುಂಡಿಗೆ ಬಲಿಯಾಗಿದ್ದಾರೆ. ಪೊಲೀಸ್ ಗೋಲಿಬಾರ್‌ನಲ್ಲಷ್ಟೇ ಸಾವು ಸಂಭವಿಸಿರುವುದಲ್ಲ. ಸ್ಥಳೀಯ ಮೇಲ್ಜಾತಿಯ ನಾಯಕರು ಪ್ರತಿಭಟನೆಗಿಳಿದ ದಲಿತರ ವಿರುದ್ಧ ಕೋವಿಯನ್ನು ಬಳಸಿದ್ದಾರೆ. ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಹೋರಾಟದಲ್ಲಿ ಭಾಗವಹಿಸಿದ ದಲಿತ ಯುವಕರು ಇಂದಿಗೂ ಜೀವಭಯದಲ್ಲಿದ್ದಾರೆ. ಪೊಲೀಸರು ಅವರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕೋರ್ಟು ಕಚೇರಿ ಅಲೆಯುವಂತೆ ಮಾಡಿದ್ದಾರೆ. ಕೋರೆಗಾಂವ್ ವಿಜಯ ದಿವಸ ಆಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಸಂಘಪರಿವಾರ ಮತ್ತು ಪೊಲೀಸ್ ವ್ಯವಸ್ಥೆ ಜೊತೆಯಾಗಿ ದಲಿತರ ಮೇಲೆ ಮುಗಿ ಬಿತ್ತು. ಕೋರೆಗಾಂವ್ ವಿಜಯ ದಿವಸ, ಸಂಘಪರಿವಾರವನ್ನು ಹಲವು ವರ್ಷಗಳಿಂದ ಕೊರೆಯುತ್ತಾ ಬಂದಿದೆ. ಈ ದಿನ ಪೇಶ್ವೆ ಮರಾಠರನ್ನು ಬ್ರಿಟಿಷರು ದಲಿತರ ನೆರವಿನಿಂದ ಸೋಲಿಸಿದರು. ಪೇಶ್ವೆಗಳ ಜಾತೀಯತೆಯನ್ನು ವಿರೋಧಿಸಿ ದಲಿತ ಮಹಾರ್ ಸೈನಿಕರು ಬಂಡೆದ್ದು ಬ್ರಿಟಿಷರ ಜೊತೆಗೆ ಸೇರಿಕೊಂಡರು. ಈ ಮೂಲಕ ತಮ್ಮ ಆತ್ಮಾಭಿಮಾನವನ್ನು ಅವರು ಉಳಿಸಿಕೊಂಡರು. ಮರಾಠರನ್ನು ಮುಂದಿಟ್ಟುಕೊಂಡು ಆರೆಸ್ಸೆಸ್ ತನ್ನ ರಾಜಕೀಯ ನಡೆಸಿಕೊಂಡು ಬರುತ್ತಿದೆ.

ಬ್ರಾಹ್ಮಣ ಸಮುದಾಯದಿಂದ ಬಂದಿರುವ ಪೇಶ್ವೆಗಳು ಆರೆಸ್ಸೆಸ್ ರಾಷ್ಟ್ರೀಯತೆಯ ಮಾದರಿ ನಾಯಕರು. ಇಂತಹ ಪೇಶ್ವೆಗಳನ್ನು ಸೋಲಿಸಿದ ದಿನವನ್ನು ದಲಿತರು ವಿಜಯ ದಿವಸವಾಗಿ ಆಚರಿಸುವುದೆಂದರೆ ಆರೆಸ್ಸೆಸ್ ಮರ್ಮಕ್ಕೆ ದಾಳಿ ನಡೆಸಿದಂತೆ. ಹಲವು ದಶಕಗಳಿಂದ ದಲಿತರು ಈ ದಿವಸವನ್ನು ಆಚರಿಸುತ್ತಾ ಬಂದರೂ, ನೇರವಾಗಿ ಅದನ್ನು ವಿರೋಧಿಸುವ ಧೈರ್ಯ ಆರೆಸ್ಸೆಸ್‌ಗಿರಲಿಲ್ಲ. ಆದರೆ ಇದೀಗ ಸಂಘಪರಿವಾರ ಸರಕಾರಕ್ಕೆ ಪರ್ಯಾಯ ಎಂಬಂತೆ ಬೆಳೆದು ನಿಂತಿದೆ. ಪೊಲೀಸರೂ ಅವರ ಬೆನ್ನಿಗಿದ್ದಾರೆ. ಈ ಧೈರ್ಯದಿಂದ ಕಳೆದ ವರ್ಷ ಜಿಗ್ನೇಶ್ ಮೇವಾನಿಯ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶವನ್ನು ಸರ್ವ ರೀತಿಯಲ್ಲಿ ವಿಫಲಗೊಳಿಸಲು ಸಂಘಪರಿವಾರ ಯತ್ನಿಸಿತು. ಅದನ್ನು ಅಷ್ಟೇ ತೀವ್ರವಾಗಿ ದಲಿತರು ಪ್ರತಿರೋಧಿಸಿದರು. ಪರಿಣಾಮವಾಗಿ ಪರಿಸ್ಥಿತಿ ಹದೆಗಟ್ಟಿತು. ಹಿಂಸಾಚಾರ ನಡೆಯಿತು. ಘಟನೆ ನಡೆದು ಹಲವು ತಿಂಗಳುಗಳು ಕಳೆದಿವೆಯಾದರೂ, ಕಾನೂನು ವ್ಯವಸ್ಥೆಯ ಮೂಲಕ ದಲಿತರ ದಮನದ ಕಾರ್ಯ ಮುಂದುವರಿಯುತ್ತಲೇ ಇದೆ. ಕೋರೆಗಾಂವ್ ಗಲಭೆಯಲ್ಲಿ ಭಾಗವಹಿಸಿದ ಹಲವು ಸಂಘಪರಿವಾರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸರಕಾರವೇ ಮುಂದೆ ನಿಂತು ಹಿಂದೆಗೆದಿದೆ. ಇದೇ ಸಂದರ್ಭದಲ್ಲಿ ದಲಿತರನ್ನು ಬಂಧಿಸುವ ಕಾರ್ಯ ನಿಂತಿಲ್ಲ. ವಿಪರ್ಯಾಸವೆಂದರೆ, ಈ ದೌರ್ಜನ್ಯಕ್ಕೆ ಸಂಬಂಧಿಸಿ ದೇಶದ ದಲಿತರ ಬಾಯಿ ಮುಚ್ಚಿಸುವುದಕ್ಕಾಗಿ ಕೋರೆಗಾಂವ್ ವಿಜಯ ದಿವಸವನ್ನು ಸಂಘಟಿಸಿದವರ ತಲೆಗೆ ‘ನಕ್ಸಲೈಟ್’ ಪಟ್ಟಿಯನ್ನು ಕಟ್ಟಿದೆ. ಅಷ್ಟೇ ಅಲ್ಲ, ಇನ್ನೂ ಮುಂದಕ್ಕೆ ಹೋಗಿ ಈ ದಲಿತ ನಕ್ಸಲರು ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಿದೆ.

 ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ಇಂಡಿಯನ್ ಮುಜಾಹಿದ್, ಲಷ್ಕರೆ ತಯ್ಯಿಬಗಳ ವಿವಿಧ ಸಂಚುಗಳು ಮಾಧ್ಯಮಗಳಲ್ಲಿ ಸಾಲು ಸಾಲಾಗಿ ಪ್ರಕಟವಾಗುತ್ತವೆ. ಗುಪ್ತಚರ ‘ಮೂಲ’ಗಳ ಹೆಸರಲ್ಲಿ ಸ್ವತಃ ಪತ್ರಿಕೆಗಳೇ ಪುಂಖಾನುಪುಂಖವಾಗಿ ಕತೆಗಳನ್ನು ಹರಿಯಬಿಡುತ್ತವೆ. ಈ ‘ಮೂಲವ್ಯಾಧಿ’ಗಳನ್ನು ಹರಡುವ ಮೂಲಕ ಜನರಲ್ಲಿ ಭಯ ಹುಟ್ಟಿಸಿ, ಬಿಜೆಪಿಯೇ ನಮ್ಮ ರಕ್ಷಕ ಎಂಬ ಮನಸ್ಥಿತಿಯನ್ನು ಬಿತ್ತಲು ಪತ್ರಿಕೆಗಳು ಶಕ್ತಿ ಮೀರಿ ಪ್ರಯತ್ನಿಸುತ್ತವೆ. ಅಷ್ಟೇ ಅಲ್ಲ, ಅಮಾಯಕ ಮುಸ್ಲಿಮರನ್ನು ಸಾಲು ಸಾಲಾಗಿ ವಶಕ್ಕೆ ಪಡೆದು, ಬಂಧಿಸಿದ ಪ್ರಹಸನವನ್ನೂ ಪೊಲೀಸರು ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಮುಸ್ಲಿಮರು ರಾಜಕೀಯವಾಗಿ ಸಂಘಟಿತರಾಗುವ ಪ್ರಯತ್ನ ನಡೆಸಿದಾಗಲೆಲ್ಲ ಆ ಸಂಘಟನೆಗಳನ್ನು ಭಯೋತ್ಪಾದಕ, ಉಗ್ರವಾದಿ ಸಂಘಟನೆ ಎಂದು ಬಗ್ಗು ಬಡಿಯುತ್ತಾ ಬಂದಿದೆ. ಇದೀಗ ಅದೇ ತಂತ್ರವನ್ನು ದಲಿತರ ವಿರುದ್ಧ ಬಳಸಲು ಸರಕಾರ ಹೊರಟಿದೆ. ಕೆಲ ತಿಂಗಳ ಹಿಂದೆ ಮುಂಬೈಯಲ್ಲಿ ರೈತರು ಮತ್ತು ಕಾರ್ಮಿಕರು ಜೊತೆ ಸೇರಿ ಬೃಹತ್ ಪಾದಯಾತ್ರೆಯೊಂದನ್ನು ಹಮ್ಮಿಕೊಂಡರು. ರಾಷ್ಟ್ರಮಟ್ಟದಲ್ಲಿ ಇದು ಸುದ್ದಿಯಾಯಿತು. ಆದರೆ ಈ ರೈತರು, ಕಾರ್ಮಿಕರ ತಲೆಗೆ ನಕ್ಸಲ್ ಪಟ್ಟಿಯನ್ನು ಕಟ್ಟಿ ಹೋರಾಟದ ಧ್ವನಿಯನ್ನು ಸರಕಾರ ಅಡಗಿಸಲು ಪ್ರಯತ್ನಿಸಿ, ವಿಫಲವಾಯಿತು.

ಕೋರೆಗಾಂವ್ ಹೋರಾಟಗಾರರಿಗೆ ನಕ್ಸಲೀಯರೆಂಬ ಬಿರುದು ಹಚ್ಚಿ, ಮೋದಿಯ ಕೊಲೆಗೆ ಸಂಚು ಹೂಡಿದ್ದಾರೆ ಎಂಬ ಕತೆಯನ್ನು ಪೊಲೀಸರು ಹೆಣೆದಿರುವುದು ಅದರ ಮುಂದುವರಿದ ಭಾಗವಾಗಿದೆ. ಈ ಆರೋಪದ ಮೂಲಕ ಪೊಲೀಸರು ಒಂದೇ ಏಟಿಗೆ ಹಲವು ಉದ್ದೇಶಗಳನ್ನು ಸಾಧಿಸಲು ಹೊರಟಿದ್ದಾರೆ. ಮೊದಲನೆಯದಾಗಿ, ದಲಿತರು ಹೋರಾಟಗಳಿಂದ ದೂರ ಉಳಿಯುವಂತೆ ಮಾಡುವುದು. ಈಗಾಗಲೇ ಕೋರೆಗಾಂವ್ ಹೋರಾಟದಲ್ಲಿ ಭಾಗವಹಿಸಿ ಜೈಲುಪಾಲಾಗಿರುವ ದಲಿತರ ಕುರಿತಂತೆ ದಲಿತರ ನಡುವೆ ಅನುಕಂಪ ಹುಟ್ಟದಂತೆ ನೋಡಿಕೊಳ್ಳುವುದು. ಅಷ್ಟೇ ಅಲ್ಲದೆ, ಇನ್ನೆಂದಿಗೂ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸದಂತೆ ತಡೆಯುವ ಹುನ್ನಾರವೂ ಇದರ ಹಿಂದಿದೆ. ಇವೆಲ್ಲದರ ಜೊತೆಗೆ 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿಯ ಹತ್ಯೆಗೆ ಸಂಚು ನಡೆಸಿದೆ ಎಂಬ ಆರೋಪವನ್ನು ದಲಿತರ ಮೇಲೆ ಹೊರಿಸುವುದು. ಈ ಮೂಲಕ ಮೋದಿಯ ಕುರಿತಂತೆ ಅನುಕಂಪದ ಅಲೆ ಹುಟ್ಟುವಂತೆ ನೋಡಿಕೊಳ್ಳುವುದು. ಇದಿಷ್ಟೇ ಅಲ್ಲ, ಹೋರಾಟಕ್ಕಿಳಿದ ದಲಿತ ನಾಯಕರನ್ನು ಮುಂದಿನ ದಿನಗಳಲ್ಲಿ ‘ಉಗ್ರವಾದಿ’ಗಳ ಜೊತೆಗೆ ಸಂಪರ್ಕದ ಹೆಸರಿನಲ್ಲಿ ಬಂಧಿಸಲು ಪೊಲೀಸರು ದಾರಿಯನ್ನು ಸುಗಮ ಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ, ಉಗ್ರವಾದದ ಹೆಸರಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ಅಮಾಯಕ ಮುಸ್ಲಿಮರ ಸಾಲಿಗೆ ದಲಿತ ಹೋರಾಟಗಾರರು ಸೇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ದಲಿತ ನಾಯಕರು ಪಕ್ಷ ಭೇದ ಮರೆತು, ಪೊಲೀಸರು ಮಾಡಿರುವ ಆರೋಪಗಳನ್ನು ಪ್ರತಿರೋಧಿಸುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News