ಏಕಾಏಕಿ ಭ್ರಷ್ಟಾಚಾರ ನಿಲ್ಲಿಸಲು ಮುಂದಾದರೆ ನನ್ನ ಸ್ಥಾನವೇ ಉಳಿಯದು : ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-11 12:37 GMT

ಬೆಂಗಳೂರು, ಜೂ. 11: ಭ್ರಷ್ಟಾಚಾರವನ್ನು ಏಕಾಏಕಿ ನಿಲ್ಲಿಸಲು ಹೋದರೆ ನನ್ನ ಸ್ಥಾನವೇ ಉಳಿಯುವುದಿಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಭ್ರಷ್ಟಾಚಾರವನ್ನು ಹಂತ ಹಂತವಾಗಿ ನಿಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಗಾಂಧಿಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ತಾನು ಶೃಂಗೇರಿ ಮಠದ ಶ್ರೀಗಳನ್ನು ಭೇಟಿ ಮಾಡಿದ್ದ ವೇಳೆ ಅವರು ಭ್ರಷ್ಟಾಚಾರ ನಿಲ್ಲಿಸಿ ಎಂದು ಹೇಳಿದ್ದರು. ಅದಕ್ಕೆ ನಾನು ಸಂಪೂರ್ಣವಾಗಿ ನಿಲ್ಲಿಸೋದು ಕಷ್ಟವೆಂದು ಹೇಳಿದ್ದೆ ಎಂದು ನೆನಪು ಮಾಡಿಕೊಂಡರು.

ಸಿಬ್ಬಂದಿ-ಅಧಿಕಾರಿಗಳ ವರ್ಗಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲೇ ಭ್ರಷ್ಟಾಚಾರ ನಡೆಯುತ್ತದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೆಲವು ಮಧ್ಯವರ್ತಿಗಳಿದ್ದಾರೆ. ವರ್ಗಾವಣೆ ಮಾಡಿಸಲು ಓಡಾಡುತ್ತಿರುತ್ತಾರೆ. ಅಧಿಕಾರಿಗಳು ಇನ್ನು ಮುಂದೆ ಶ್ರದ್ಧೆಯಿಂದ ಕೆಲಸ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಮೈತ್ರಿಕೂಟ ಸರಕಾರ ಇದೆ. ಸರಕಾರ ಟೇಕ್ ಆಫ್ ಆಗಿಲ್ಲ ಅನ್ನೋ ವರದಿ ನೀಡುತ್ತಿದ್ದೀರಾ? ನಮಗೆ ಯಾವುದೇ ಭಯವಿಲ್ಲ. 5 ವರ್ಷ ನಮ್ಮ ಸರಕಾರ ನಡೆಯುತ್ತದೆ. ಇಂತಹ ವರದಿಗಳನ್ನು ಹೇಗೆ ಸೃಷ್ಟಿ ಮಾಡುತ್ತಾರೋ, ಯಾರು ಸುದ್ದಿ ಕೊಡುತ್ತಾರೋ ಗೊತ್ತಿಲ್ಲ. ಸುಳ್ಳು ವರದಿಗಳನ್ನು ಹಾಕಬೇಡಿ. ದೇವೇಗೌಡರನ್ನು ಮನೆಯಲ್ಲಿ ಕೂರಿಸಿ ನಾನು ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದರು.

ನಾನು ದುಡ್ಡು ಮಾಡಲಿಕ್ಕೆ ರಾಜ್ಯದಲ್ಲಿ ಅಧಿಕಾರ ಪಡೆದಿಲ್ಲ. ನಾನು ಎಷ್ಟು ದಿನ ಬದುಕುತ್ತೇನೆಂದೇ ನನಗೆ ಗೊತ್ತಿಲ್ಲ. ಎರಡು ಬಾರಿ ಶಸ್ತ್ರ ಚಿಕಿತ್ಸೆಯಾಗಿದ್ದು, ಜನರಿಗಾಗಿ ನಾನು ಅಧಿಕಾರ ಪಡೆದಿದ್ದೇನೆ. ದೇವರ ಕೃಪೆ, ಹಿರಿಯರ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿ ಆಗಿದ್ದೇನೆ. ಬಹಳ ಜನರಿಗೆ ಸಮ್ಮಿಶ್ರ ಸರಕಾರ ರಚನೆ ಸಂದರ್ಭ ಬಂದರೆ ಬಿಜೆಪಿ ಜತೆ ಹೋಗುತ್ತೇನೆ ಎನ್ನುವ ಭಾವನೆ ಇತ್ತು. ಬಿಜೆಪಿಯಿಂದಲೂ ನನಗೆ ಆಫರ್ ಇತ್ತು. ಆದರೆ, ಕಳೆದ ಬಾರಿಗೂ ಈ ಬಾರಿಗೂ ವ್ಯತ್ಯಾಸ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News