ಕೈಕಟ್ಟಿ ಕೂರುವ ಸಭಾಪತಿ ಸ್ಥಾನ ನನಗೆ ಬೇಡ: ಬಸವರಾಜ ಹೊರಟ್ಟಿ
ಬೆಳಗಾವಿ, ಜೂ. 11: ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ಬಿಟ್ಟರೆ ಹುಬ್ಬಳ್ಳಿ- ಧಾರವಾಡ ದೊಡ್ಡ ಜಿಲ್ಲೆಯಲ್ಲಿ ಮೈತ್ರಿ ಸರಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು. ಪರಿಷತ್ತಿನಲ್ಲಿ ನಾನು ಹಿರಿಯ ಸದಸ್ಯ. ಆದರೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈಬಿಟ್ಟಿದ್ದು ಯಾಕೆ ಅಂತ ಗೊತ್ತಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ವಿಧಾನ ಪರಿಷತ್ ಸಭಾಪತಿ ಹುದ್ದೆ ನೀಡುವ ವಿಚಾರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜ್ಯದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ನನಗೆ ಶಿಕ್ಷಣ ಸಚಿವನಾಗುವ ಬಯಕೆ ಇತ್ತು, ಕೈಕಟ್ಟಿ ಕೂರುವ ಸಭಾಪತಿ ಸ್ಥಾನ ಬೇಡ ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬುದು ಜನರ ಮನಸ್ಸಿನಲ್ಲಿದೆ. ಆದರೆ, ನನ್ನನ್ನು ಮಂತ್ರಿ ಮಾಡುವಂತೆ ಯಾರಲ್ಲೂ ನಾನು ಭಿಕ್ಷೆ ಕೇಳುವುದಿಲ್ಲ. 38 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ನನಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸಚಿವ ಸಂಪುಟದಿಂದ ಹೊರ ಹಾಕಿದ್ದಾರೆ. ನನ್ನನ್ನು ಹಾಗೂ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಇದೆಲ್ಲ ನೋಡಿದರೆ ಇದಕ್ಕೆ ಪುಷ್ಟಿ ನೀಡುತ್ತದೆ. ಲಿಂಗಾಯತ ಧರ್ಮ ಪರ ಹೋರಾಟ ಮಾಡಿದ್ದರಿಂದ ಕೆಲ ಸ್ವಾಮೀಜಿಗಳಿಂದ ಅಪಪ್ರಚಾರ ನಡೆಯಿತು ಎಂದು ಟೀಕಿಸಿದರು.
ನಾವು ಎಂದೂ ಜಾತಿ ಮಾಡಿದವರಲ್ಲ. ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದು ನಿಜ. ಎಲ್ಲರೂ ಮಾಡುವುದನ್ನು ನಾವು ಮಾಡಿದ್ದೇವೆ. ನಾವೇನು ಕೊಲೆ, ದರೋಡೆ ಮಾಡಿಲ್ಲ. ಇದನ್ನೇ ತಪ್ಪುಎಂದು ಭಾವಿಸಿದ್ದರೆ, ನಾವೇನು ಮಾಡೋಕೆ ಆಗುವುದಿಲ್ಲ ಎಂದು ಹೇಳಿದರು.