ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೆ ಕೆಎಸ್ಸಾರ್ಟಿಸಿ ಬಸ್ ಪಾಸ್ ವಿತರಣೆ ಆರಂಭ

Update: 2018-06-11 12:57 GMT

ಬೆಂಗಳೂರು, ಜೂ. 11: 2018-19ನೆ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರು ಅಭ್ಯಸಿಸುತ್ತಿರುವ ಸಂಬಂಧಪಟ್ಟ ಕಾಲೇಜುಗಳ ಮುಖಾಂತರ ಬಸ್ ಪಾಸ್‌ಗಳನ್ನು ವಿತರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಆರಂಭಿಸಿದೆ.

ಯಾವುದೇ ವಿದ್ಯಾರ್ಥಿಗಳು ನೇರವಾಗಿ ಪಾಸ್ ಕೌಂಟರ್‌ಗೆ ಬರುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿ ವರ್ಗದವರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ. ಸದರಿಯವರು ಸಂಸ್ಕರಣಾ ಶುಲ್ಕ ಹಾಗೂ ಅಪಘಾತ ಪರಿಹಾರ ನಿಧಿ (ಒಟ್ಟು 150ರೂ.) ಮೊತ್ತವನ್ನು ಪಾವತಿಸಬೇಕಿರುತ್ತದೆ.

ಈ ವರ್ಗದ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು ಅರ್ಜಿಯ ಜೊತೆಗೆ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಉಳಿದ ವಿದ್ಯಾರ್ಥಿಗಳು 1,050 ರೂ. ಪಾವತಿಸಿ ಪಾಸುಗಳನ್ನು ಪಡೆಯಬೇಕಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೇ ತಿಂಗಳಿಂದ ತರಗತಿಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಕಳೆದ ವರ್ಷದ ಪಾಸನ್ನು ತೋರಿಸಿ ಜೂನ್ ಅಂತ್ಯದ ವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾ ಕಲ್ಪಿಸಲಾಗಿದೆ.

ಜೂನ್ ಅಂತ್ಯದೊಳಗೆ ಹೊಸದಾಗಿ ಪಾಸನ್ನು ಪಡೆದುಕೊಳ್ಳಬೇಕಿರುತ್ತದೆ. ನಿಗಮದ ಎಲ್ಲ ಬಸ್ ನಿಲ್ದಾಣಗಳಲ್ಲಿ ಹಾಗೂ ನಿಗಮದ ವೆಬ್‌ಸೈಟ್‌ನಲ್ಲಿ(www.ksrtc.in) ಪಾಸ್ ಅರ್ಜಿಗಳು ಲಭ್ಯವಿರುತ್ತದೆ. ಭರ್ತಿಗೊಳಿಸಿದ ಅರ್ಜಿಗಳನ್ನು ಕಾಲೇಜುಗಳಲ್ಲಿ ದೃಢೀಕರಿಸಬೇಕಿರುತ್ತದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News