ಸಿಡಿಲ ಆಘಾತದಿಂದ 94 ಮಂದಿಯ ಸಾವು: ಕಂದಾಯ ಸಚಿವ ದೇಶಪಾಂಡೆ
ಬೆಂಗಳೂರು, ಜೂ. 11: ರಾಜ್ಯದಲ್ಲಿ ವಾಡಿಕೆಗಿಂತ ಶೇ.54ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಮಳೆಹಾನಿಯಿಂದ 104ಮಂದಿ ಅಸುನೀಗಿದ್ದು, ಅವರೆಲ್ಲರಿಗೂ ತಲಾ 5ಲಕ್ಷ ರೂ.ನಂತೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಅನಾಹುತಗಳಿಂದ ಉಂಟಾದ ಜೀವ ಹಾಗೂ ಆಸ್ತಿಪಾಸ್ತಿ ಹಾನಿಗೆ ತಕ್ಷಣ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಸದ್ಯಕ್ಕೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳ ಖಾತೆಯಲ್ಲಿ 186 ಕೋಟಿ ಅನುದಾನ ಲಭ್ಯವಿದ್ದು, ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ 320 ಕೋಟಿ ಹಣವಿದ್ದು, ಇದನ್ನು ಬಳಸಿಕೊಂಡು ಪರಿಹಾರ ಕಾರ್ಯಗಳನ್ನು ಕೈಗಿತ್ತಿಕೊಳ್ಳಲಾಗುವುದು ಎಂದ ಅವರು, ಬೆಳೆ ನಷ್ಟದ ಸಮೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರ ಕೇಂದ್ರದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಿಡಿಲಾಘಾತಕ್ಕೆ 94 ಬಲಿ: ಮಳೆಹಾನಿಯಿಂದ ಸಾವಿಗೀಡಾದ 104 ಮಂದಿ ಪೈಕಿ 94 ಮಂದಿ ಸಿಡಿಲಾಘಾತಕ್ಕೆ ಬಲಿಯಾಗಿದ್ದಾರೆ. ಉಳಿದ 10 ಮಂದಿ ಮಳೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.
ರಾಜ್ಯದಲ್ಲಿ 2,298 ಮನೆಗಳು ಮಳೆಯಿಂದ ಹಾನಿಯಾಗಿವೆ. ಆ ಪೈಕಿ 189 ಮಳೆಗಳು ಸಂಪೂರ್ಣ ಹಾನಿಯಾಗಿದ್ದು, 2,101 ಮನೆಗಳು ಭಾಗಶಃ ಹಾನಿಯಾಗಿವೆ. ಭಾಗಶಃ ಹಾನಿಗೀಡಾದ ಪ್ರತಿ ಮನೆಗೆ 5,200 ರೂ.ನಂತೆ ಹಾಗೂ ಪೂರ್ಣ ಹಾನಿಯಾದ ಮನೆಗಳಿಗೆ ತಲಾ 95,100ರೂ.ಪರಿಹಾರ ವಿತರಣೆ ಮಾಡಲಾಗಿದೆ.
332 ಜಾನುವಾರುಗಳು ಮೃತಪಟ್ಟಿದ್ದು, ಪ್ರತಿಯೊಂದು ಜಾನುವಾರಿಗೆ ತಲಾ 25 ಸಾವಿರ ರೂ.ನಂತೆ ಪರಿಹಾರ ನೀಡಲಾಗಿದ್ದು, ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 8.63 ಕೋಟಿ ರೂ.ಪರಿಹಾರ ವಿತರಣೆ ಮಾಡಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಪರಿಸ್ಥಿತಿ ಸುಧಾರಣೆ: ರಾಜ್ಯದಲ್ಲಿ ಅವಧಿಗೂ ಮೊದಲೆ ಮಳೆ ಬಿದ್ದ ಪರಿಣಾಮ ಕುಡಿಯುವ ನೀರಿನ ಪರಿಸ್ಥಿತಿ ಸುಧಾರಣೆಯಾಗಿದೆ. ಕೇವಲ 248 ಹಳ್ಳಿಗಳಲ್ಲಿ ಮಾತ್ರ ನೀರಿನ ಅಭಾವವಿದ್ದು, 401 ಟ್ಯಾಂಕರ್‌ಗಳ ಮೂಲಕ ಸಮಸ್ಯೆ ಇರುವ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಚಟುವಟಿಕೆ ಚುರುಕು: ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಕಾಲದಲ್ಲಿ ರೈತರಿಗೆ ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಾದ ರಮಣರೆಡ್ಡಿ, ಗಂಗಾರಾಮ್ ಬಡೇರಿಯಾ, ಮುನೀಶ್ ಮೌದಗಿಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸರ್ವೆಯರ್‌ಗಳ ನೇಮಕ
‘ಇಲಾಖೆಯಲ್ಲಿ ಖಾಲಿ ಇರುವ ಸರ್ವೆಯರ್‌ಗಳ ನೇಮಕಕ್ಕೆ ಕ್ರಮ ವಹಿಸಿದ್ದು, ತರಬೇತಿಯಲ್ಲಿರುವ 1067 ಸರ್ವೆಯರ್‌ಗಳಿಗೆ ಶೀಘ್ರವೇ ನೇಮಕಾತಿ ಆದೇಶ ನೀಡಲಾಗುವುದು. ಅಲ್ಲದೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಕಾನೂನಿನ ಪ್ರಕಾರ ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡಲಾಗುವುದು’
-ಆರ್.ವಿ.ದೇಶಪಾಂಡೆ ಕಂದಾಯ ಸಚಿವ