ಮಾಜಿ ಸಿಎಂ ಹ್ಯೂಬ್ಲೋ ವಾಚ್ ಪ್ರಕರಣ : ಪಿಐಎಲ್ ಹಿಂಪಡೆದ ಅನುಪಮಾ ಶೆಣೈ

Update: 2018-06-11 16:06 GMT

ಬೆಂಗಳೂರು, ಜೂ.11: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ವಾಪಾಸ್ ಪಡೆಯಲಾಗಿದ್ದು, ಹ್ಯೂಬ್ಲೋ ವಾಚ್ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಹ್ಯೂಬ್ಲೋ ವಾಚ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ದಿನೇಶ್ ಮಹೇಶ್ವರಿ ಹಾಗೂ ಕೃಷ್ಣ ಎಸ್. ದೀಕ್ಷಿತ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸಿದ್ದರಾಮಯ್ಯ ದುಬಾರಿ ವಾಚ್ ಉಡುಗೊರೆ ಪಡೆದಿದ್ದ ಪ್ರಕರಣ ತನಿಖೆ ನಡೆಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹಿಂಪಡೆದಿದ್ದಾರೆ.

ಇದನ್ನು ಸಾರ್ವಜನಿಕ ಹಿತಾಸಕ್ತಿ ಆಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿದ ಹೈಕೋರ್ಟ್ ಬೇರೆ ಯಾವುದಾದರೂ ಮಾರ್ಗದ ಅಡಿಯಲ್ಲಿ ಕ್ರಮಕ್ಕೆ ಮುಂದಾಗಲು ಹೈಕೋರ್ಟ್ ಅರ್ಜಿದಾರರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನುಪಮಾ ಶೆಣೈ ಪರ ವಕೀಲ ಅಮೃತೇಶ್, ಎ ನ್.ಪಿ., ಪಿಐಎಲ್‌ನ್ನು ಹಿಂಪಡೆದಿದ್ದಾರೆ.

ಡಾ. ಗಿರೀಶ್ ಚಂದ್ರವರ್ಮಾ ಎಂಬುವರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚ್‌ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಅನುಪಮಾ ಶೆಣೈ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News