×
Ad

ಬಾಬಾಬುಡನ್‌ಗಿರಿ ವಿವಾದ : ಜೂ.18ರವರೆಗೆ ಯಾವುದೆ ಕ್ರಮ ಜರುಗಿಸದಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2018-06-11 22:17 IST

ಬೆಂಗಳೂರು, ಜೂ.11: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದ ಪೂಜಾ ವಿಧಾನದ ಬಗ್ಗೆ ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶದನ್ವಯ ಜೂ. 18ರವರೆಗೆ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವಧರ್ನಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. ಅಲ್ಲದೆ, ರಾಜ್ಯ ಸರಕಾರ, ಹಿಂದೂ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಸೈಯದ್ ಗೌಸ್ ಮೊಹಿದ್ದೀನ್ ಶಾ ಖಾದ್ರಿ ಅವರಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರ ಪರ ವಕೀಲರು ವಕೀಲ ಜಗದೀಶ್ ಬಾಳಿಗ ವಾದ ಮಂಡಿಸಿ, ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ ವರದಿಯನ್ನು ಒಪ್ಪಿ ರಾಜ್ಯ ಸರಕಾರ ದತ್ತ ಪೀಠಕ್ಕೆ ಮುಸ್ಲಿಂ ಮೌಲ್ವಿಯೊಬ್ಬರನ್ನು ಅರ್ಚಕರನ್ನಾಗಿ ನೇಮಿಸಿ ಮಾರ್ಚ್ 19ರಂದು ಆದೇಶಿಸಿದೆ. ಆದರೆ, ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ನ್ಯಾ.ನಾಗಮೋಹನ ದಾಸ್ ಅವರ ಸಮಿತಿ ರಚಿಸಲಾಗಿತ್ತು. ಆ ಸಮಿತಿಯು ದತ್ತ ಪೀಠಕ್ಕೆ ಭೇಟಿಯೇ ನೀಡಿಲ್ಲ. ಆದರೂ ಹಲವು ಶಿಫಾರಸುಗಳನ್ನು ಮಾಡಿದ್ದು, ಅದನ್ನು ಹಿಂದಿನ ಸರಕಾರ ಒಪ್ಪಿದೆ. ಅಲ್ಲದೆ, ತರಾತುರಿಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲು ಮುಂದಾಗಿದೆ ಎಂದು ದೂರಿದರು.

ಹಾಗೆಯೇ, ರಾಜ್ಯ ಸರಕಾರವು ಪ್ರಕರಣದಲ್ಲಿ ಒಂದು ಸಮುದಾಯದ ಪರ ನಡೆದುಕೊಳ್ಳುತ್ತಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಏಕಪಕ್ಷೀಯ ಹಾಗೂ ಜವಾಬ್ದಾರಿಯಿಂದ ನಿರ್ಣಯ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ದೂರಿದರು.

ವಿಚಾರಣೆಗೆ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಮುಂದಿನ ವಿಚಾರಣೆವರೆಗೂ ಪ್ರಕರಣದಲ್ಲಿ ಯಾವುದೇ ಮುಂದಿನ ಕ್ರಮ ಜರುಗಿಸುವುದಿಲ್ಲ ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಜೂನ್ 18ರವರೆಗೆ ಕಾಲಾವಕಾಶ ನೀಡಿತು. ಅಲ್ಲದೆ, ಅರ್ಜಿಯ ಮುಂದಿನ ವಿಚಾರಣೆವರೆಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಾರ್ಚ್ 19ರಂದು ಹೊರಡಿಸಿದ ಆದೇಶದನ್ವಯ ಯಾವುದೇ ಆತುರದ ಕ್ರಮ ಜರುಗಿಸಬಾರದು ಎಂದು ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News