ಅಮಾಯಕನೊಬ್ಬನ ವಿರುದ್ಧ ಸುಳ್ಳು ಪ್ರಕರಣ ದಾಖಲು : ಪರಿಹಾರ ಧನ ಕೋರಿ ಅರ್ಜಿ ದಾಖಲಿಸಲು ಹೈಕೋರ್ಟ್ ಸಲಹೆ

Update: 2018-06-11 16:52 GMT

ಬೆಂಗಳೂರು, ಜೂ.11: ಅಮಾಯಕನೊಬ್ಬನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಮಂಗಳೂರಿನ ಬರ್ಕೆ ಠಾಣಾ ಪೊಲೀಸರ ವಿರುದ್ಧ ಪರಿಹಾರ ಧನ ಕೋರಿ ಅರ್ಜಿ ದಾಖಲಿಸುವಂತೆ ಹೈಕೋರ್ಟ್ ಸಲಹೆ ನೀಡಿದ ಘಟನೆ ಸೋಮವಾರ ನಡೆಯಿತು.

ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿ ಮೂರು ದಿನ ಜೈಲಿನಲ್ಲಿಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕದಸ್ಯ ಪೀಠ ಸಲಹೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪಿ. ಹೆಗ್ಡೆ ವಾದಿಸಿ, ಅರ್ಜಿದಾರರ ಮಹೇಂದ್ರ ಕುಮಾರ್ ಪಾಲ್ ವಿರುದ್ಧ ಬರ್ಕೆ ಠಾಣಾ ಪೊಲೀಸರು ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದರಿಂದ ಆತ ಮೂರು ದಿನ ಜೈಲು ವಾಸ ಅನುಭವಿಸಿ, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ನಂತರ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ಆರೋಪಿ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ದೂರಿದರು.

ಅಲ್ಲದೆ, ಪೊಲೀಸರು ಸುಳ್ಳು ಪ್ರಕರಣದಲ್ಲಿ ಅಮಾಯಕನಾದ ಅರ್ಜಿದಾರರನ್ನು ಸಿಲುಕಿಸಿದ್ದಾರೆ. ಪ್ರಕರಣದಿಂದ ಅರ್ಜಿದಾರ ಸಾಕಷ್ಟು ಕಿರುಕುಳ, ಅವಮಾನ ಹಾಗೂ ಮಾನಸಿಕ ಹಿಂಸೆಗೊಳಗಾಗಿದ್ದಾನೆ. ಹೀಗಾಗಿ, ಸಾಕ್ಷಾಧಾರಗಳು ಇಲ್ಲವಾದ ಕಾರಣ ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ದೋಷಾರೋಪ ಪಟ್ಟಿಯಿಂದ ಅರ್ಜಿದಾರರ ಹೆಸರು ಕೈ ಬಿಟ್ಟಿರುವಾಗ, ಎಫ್‌ಐಆರ್ ರದ್ದುಪಡಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಕಾರಣ ಎಫ್‌ಐಆರ್ ಅನ್ನು ದೋಷಾರೋಪಪಟ್ಟಿಯಲ್ಲಿ ವಿಲೀನ ಮಾಡಲಾಗಿರುತ್ತದೆ. ಆದರೆ, ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ಸಂತ್ರಸ್ತನು ಪರಿಹಾರ ಧನ ಕೋರಿ ತಕರಾರು ಅರ್ಜಿ ಸಲ್ಲಿಸಬಹುದು. ಹೈಕೋರ್ಟ್ ಸಹ ಈ ಹಿಂದೆ ಸುಳ್ಳು ಪ್ರಕರಣವೊಂದನ್ನು ದಾಖಲಿಸಿದ್ದ ಪೊಲೀಸರಿಗೆ 3 ಲಕ್ಷ ದಂಡ ವಿಧಿಸಿ ಸಂತ್ರಸ್ತನಿಗೆ ಆ ಹಣವನ್ನು ಪರಿಹಾರವಾಗಿ ನೀಡಲು ಸೂಚಿಸಿತ್ತು. ಅಲ್ಲದೆ, ಸಂತ್ರಸ್ತ ತೃಪ್ತಿಯಾಗದಿದ್ದರೆ, ತನಗೆ ಉಂಟಾದ ಹಾನಿಯ ಪರಿಹಾರಕ್ಕಾಗಿ ಸಿವಿಲ್ ಅರ್ಜಿಯನ್ನೂ ದಾಖಲಿಸಲೂಬಹುದು ಎಂದು ಅನುಮತಿ ನೀಡಿತ್ತು ಎಂಬುದಾಗಿ ಸಲಹೆ ನೀಡಿದರು.
ನಂತರ ಅರ್ಜಿದಾರ ವಿರುದ್ಧ ಎಫ್‌ಐಆರ್ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣದಲ್ಲಿ ಅರ್ಜಿದಾರನು ಸೂಕ್ತ ವೇದಿಕೆಯಲ್ಲಿ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News