ಮೈಸೂರು;ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ: ಪ್ರಾದೇಶಿಕ ಆಯುಕ್ತೆ ಹೇಮಲತಾ ಪೊನ್ನುರಾಜ್

Update: 2018-06-11 17:42 GMT

ಮೈಸೂರು,ಜೂ.11:  ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಹಾಗೂ ನೈರುತ್ಯ ಪದವೀಧರರ ಕ್ಷೇತ್ರ ಗಳಿಗೆ ಜೂ.8ರಂದು ಚುನಾವಣೆ ನಡೆದಿದ್ದು,  ಮತ ಎಣಿಕೆ ಕಾರ್ಯ ಜೂ.12 ರ ಮಂಗಳವಾರ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ, ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಹೇಮಲತಾ ಪೊನ್ನುರಾಜ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂ.12ರಂದು ಬೆಳಿಗ್ಗೆ 7.30ಕ್ಕೆ ಅಭ್ಯರ್ಥಿಗಳು ಅವರ ಅಧಿಕೃತ ಏಜೆಂಟಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗುವುದು.  ಒಂದೇ ಹಾಲ್ ನಲ್ಲಿ ಮೂರು ವಿಭಾಗಗಳಾಗಿ ಮಾಡಿ ಪ್ರತೀ ಟೇಬಲ್ ಗೆ ರಿಟರ್ನಿಂಗ್ ಆಫೀಸರ್, ಸೂಪರ್ ವೈಸರ್ ಗಳು, ಸಹಾಯಕರನ್ನು ನಿಯೋಜಿಸಲಾಗಿದೆ. 35ಆಫೀಸರ್ ಗಳು, 145 ಕೌಂಟಿಂಗ್ ಸೂಪರ್ ವೈಸರ್ಸ್ ಮತ್ತು ಸಹಾಯಕರು, 60 ಸಹಾಯಕರು, 50 ಗ್ರೂಪ್ ಡಿ ಎಂಪ್ಲಾಯೀಸ್, ಇತರ ಸಿಬ್ಬಂದಿಗಳು 25, 120 ಪೆÇಲೀಸ್ ರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

 ಕೇಂದ್ರದ ಹಾಲ್ ನಲ್ಲಿ ಮತ ಎಣಿಕಾ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ನಡೆದಿರುವ ಹಿನ್ನಲೆಯಲ್ಲಿ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. ಮೊದಲ ಸುತ್ತಲಿನ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಮಾತ್ರ ಎಣಿಕೆ ಮಾಡಲಾಗುವುದು. ಒಂದು ವೇಳೆ ಕೋಟಾ ತಲುಪದೇ ಇದ್ದಲ್ಲಿ ಕಡಿಮೆ ಮತ ಪಡೆದ ಅಭ್ಯರ್ಥಿಯ ಮತಗಳನ್ನು  ಹಂಚಲಾಗುವುದು. ಮತ ಎಣಿಕೆ ಕಾರ್ಯಕ್ಕಾಗಿ 435ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಲೋಪದೋಷವಿಲ್ಲದಂತೆ ಎಣಿಕೆ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ವಾಹನ ಸಂಚಾರ ನಿರ್ಬಂಧ: ಮೈಸೂರು-ಹುಣಸೂರು ರಸ್ತೆಯಲ್ಲಿ ಪಡುವಾರಹಳ್ಳಿ ಸಿಗ್ನಲ್ ಲೈಟ್ ಜಂಕ್ಷನ್‍ನಿಂದ ಪೂರ್ವಕ್ಕೆ ಕಲಾಮಂದಿರ ಜಂಕ್ಷನ್‍ವರೆಗೆ ಜೋಡಿ ರಸ್ತೆಯ ಎರಡೂ ಪಥಗಳಲ್ಲಿ ಎರಡೂ ದಿಕ್ಕಿನಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಲ್ಮೀಕಿ ರಸ್ತೆಯಲ್ಲಿ ಹುಣಸೂರು ರಸ್ತೆ ಜಂಕ್ಷನ್‍ನಿಂದ ಉತ್ತರಕ್ಕೆ ಕಾಳಿದಾಸ ರಸ್ತೆ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.  ವಾಲ್ಮೀಕಿ ರಸ್ತೆಯಲ್ಲಿ ಕಾಳಿದಾಸ ರಸ್ತೆ ಜಂಕ್ಷನ್‍ನಿಂದ ದಕ್ಷಿಣಕ್ಕೆ ಹುಣಸೂರು ರಸ್ತೆ ಜಂಕ್ಷನ್‍ವರೆಗೆ (ಪತ್ರಿಕಾ ಮಾಧ್ಯಮದವರು, ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರುಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ರವರುಗಳ ವಾಹನಗಳನ್ನು ಹೊರತು ಪಡಿಸಿ) ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.  

ಆದಿಪಂಪ ರಸ್ತೆಯಲ್ಲಿ ಮಾತೃಮಂಡಳಿ ವೃತ್ತದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.  ಹುಣಸೂರು ರಸ್ತೆಯಲ್ಲಿ ಸೆಂಟ್ ಜೋಸೆಫ್ ಕಾನ್ವೆಂಟ್ ಜಂಕ್ಷನ್‍ನಿಂದ ಪೂರ್ವಕ್ಕೆ ಪಡುವಾರಹಳ್ಳಿ ಸಿಗ್ನಲ್ ಲೈಟ್ ಜಂಕ್ಷನ್‍ವರೆಗೆ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಾಳಿದಾಸ ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್‍ನಿಂದ ಪಶ್ಚಿಮಕ್ಕೆ(ಹಳೆ ಒಂಟಿಕೊಪ್ಪಲು) ಮಾತೃಮಂಡಳಿ ವೃತ್ತದವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿ, ಇದೇ ಭಾಗದ ರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಬರುವ ಚುನಾವಣಾ ಅಭ್ಯರ್ಥಿಗಳು, ಪಕ್ಷದ ಏಜೆಂಟರುಗಳು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ಸಂಚರಿಸಲು ಕೆ.ಆರ್.ಎಸ್ ರಸ್ತೆಯಿಂದ ವಾಲ್ಮೀಕಿ ರಸ್ತೆ-ಆದಿಪಂಪ ರಸ್ತೆ ಜಂಕ್ಷನ್‍ನಲ್ಲಿ ಬಲತಿರುವು ಆದಿಪಂಪ ರಸ್ತೆ ಮೂಲಕ ನಾರಾಯಣಸ್ವಾಮಿ ಬ್ಲಾಕ್ ರಸ್ತೆಗೆ ಎಡತಿರುವು ಪಡೆದು ಪಡುವಾರಹಳ್ಳಿ ಮಹದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮೈದಾನ ತಲುಪಿ ವಾಹನಗಳನ್ನು ನಿಲುಗಡೆ ಮಾಡಿ ಮತ ಎಣಿಕೆ ಕೇಂದ್ರಕ್ಕೆ ಸಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News