ಪಾವಗಡ ತಾಲೂಕಿಗೆ ನೀರಾವರಿ, ನನ್ನ ಆದ್ಯತೆ: ಸಚಿವ ವೆಂಕಟರಮಣಪ್ಪ
ತುಮಕೂರು,ಜೂ.11:ಹಿಂದುಳಿದ ಪಾವಗಡ ತಾಲೂಕಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಸಚಿವರು, ಡಾ.ಶ್ರೀಶಿವಕುಮಾರ ಸ್ವಾಮೀಜಿಗಳಿಂದ ಆಶೀರ್ವಾದ ಪಡೆಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪಾವಗಡ ತಾಲೂಕಿಗೆ ನೀರು ಒದಗಿಸುವ 2350 ಕೋಟಿ ರೂ.ಗಳ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮೋದನೆ ದೊರೆತು,ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.ಇನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
ಸಣ್ಣ ಕೈಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಪಾವಗಡದಲ್ಲಿ 40 ಎಕರೆ ಪ್ರದೇಶದಲ್ಲಿ ಗಾರ್ಮೆಂಟ್ಸ್ ಕೈಗಾರಿಕೆಯನ್ನು ಆರಂಭಿಸಲಾಗಿತ್ತು.ತಾಲೂಕಿನ ನಿರುದ್ಯೋಗಿಗಳಿಗೆ ಹಾಗೂ ಬಡವರಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಸೂಲಿ ಮಾಡುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕ್ರಮ: ಇಎಸ್‍ಐ, ಪಿಎಫ್ ಮತ್ತಿತರ ಹೆಸರಿನಲ್ಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಂದ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಈ ಸಂಬಂಧ ಶೀಘ್ರ ಅಧಿಕಾರಿಗಳೊಂದಿಗೆ ಚರ್ಚಿಸಿ,ಇಂತಹ ವಂಚನೆಗಳನ್ನು ನಿಯಂತ್ರಿಸಲಾಗುವುದು.ಬಹುತೇಕ ಕಾರ್ಮಿಕರು ಬಡ ಕುಟುಂಬದಿಂದ ಬಂದವರಾಗಿದ್ದು,ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.