ಲಿಂಗಾಯತ ಸ್ವತಂತ್ರ ಧರ್ಮ ಆಂದೋಲನಕ್ಕೆ ಹೊಸ ಸವಾಲು

Update: 2018-06-12 03:17 GMT

ನೂತನ ಸರಕಾರ ರಚನೆಯಾದ ಬೆನ್ನಿಗೇ ‘ಲಿಂಗಾಯತ ಸ್ವತಂತ್ರ ಧರ್ಮ’ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದಿನ ಸರಕಾರ ಲಿಂಗಾಯತ ಧರ್ಮ ಸ್ವತಂತ್ರವಾಗಬೇಕು ಎನ್ನುವ ಪ್ರಸ್ತಾವವನ್ನು ಕೇಂದ್ರಕ್ಕೆ ದಾಟಿಸಿ ಬದುಕಿಕೊಂಡಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಕಳೆದ ಚುನಾವಣೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತಾದರೂ, ಕಾಂಗ್ರೆಸ್‌ಗೇನೂ ದೊಡ್ಡ ಫಲ ಕೊಟ್ಟಿಲ್ಲ. ಇದೇ ಸಂದರ್ಭದಲ್ಲಿ, ಲಿಂಗಾಯತ ಸ್ವತಂತ್ರ ಧರ್ಮ ಆಂದೋಲನದ ನೈತಿಕ ಶಕ್ತಿಯನ್ನು ಕುಗ್ಗಿಸುವುದಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ್ನು ಸೋಲಿಸಲೇಬೇಕು ಎಂಬ ಒತ್ತಡಕ್ಕೆ ಸಂಘಪರಿವಾರ ಸಿಲುಕಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ಮುಂದಿಟ್ಟುಕೊಂಡ ಬಿಜೆಪಿ ‘‘ಸಿದ್ದರಾಮಯ್ಯ ಹಿಂದೂ ಧರ್ಮವನ್ನು ಒಡೆಯುತ್ತಿದ್ದಾರೆ’’ ಎಂದು ಹುಯಿಲೆಬ್ಬಿಸಿತು. ಲಿಂಗಾಯತ ಸ್ವತಂತ್ರ ಧರ್ಮವನ್ನು ವಿರೋಧಿಸಿದ ವೀರಶೈವರೂ ಬಿಜೆಪಿಯ ಜೊತೆಗೆ ಬಲವಾಗಿ ನಿಂತರು. ಇದೇ ಸಂದರ್ಭದಲ್ಲಿ ಲಿಂಗಾಯತರು ಚುನಾವಣೆಯಲ್ಲಿ ಅದೇ ಬದ್ಧತೆಯಿಂದ ಬಿಜೆಪಿಯ ವಿರುದ್ಧ ನಿಲ್ಲಲಿಲ್ಲ. ಲಿಂಗಾಯತ ಧರ್ಮ ಮತ್ತು ಆರೆಸ್ಸೆಸ್‌ನ ನಡುವೆ ಅಗಾಧವಾಗಿರುವ ಸೈದ್ಧಾಂತಿಕ ಭಿನ್ನಮತಗಳನ್ನು ಅನುಯಾಯಿಗಳಿಗೆ ಸ್ಪಷ್ಟಪಡಿಸಲು ಲಿಂಗಾಯ ನೇತಾರರು ವಿಫಲವಾಗಿರುವುದು ಇದಕ್ಕೆ ಪ್ರಮುಖ ಕಾರಣ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಒತ್ತಾಸೆಯಾಗಿ ನಿಂತ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ ಕೆಲವು ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಆದರೆ ಈ ಬೆಂಬಲ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿಲ್ಲ. ಇದು ರಾಜಕೀಯವಾಗಿ ಲಿಂಗಾಯತ ಸ್ವತಂತ್ರ ಧರ್ಮದ ಕೂಗಿಗೆ ಸಣ್ಣ ಹಿನ್ನಡೆಯೇ ಸರಿ. ಇದೇ ಸಂದರ್ಭದಲ್ಲಿ, ಚುನಾವಣಾ ಪೂರ್ವದಲ್ಲಿ ಲಿಂಗಾಯತರ ಆಂದೋಲನಕ್ಕೆ ಸ್ಪಂದಿಸಿದಂತೆ ಕಾಂಗ್ರೆಸ್ ಈಗ ಸ್ಪಂದಿಸುವ ಸ್ಥಿತಿಯಲ್ಲಿ ಇಲ್ಲ. ಮುಖ್ಯವಾಗಿ ರಾಜ್ಯ ಕಾಂಗ್ರೆಸ್‌ನ ನಿಯಂತ್ರಣ ಸಿದ್ದರಾಮಯ್ಯ ಅವರಲ್ಲಿಲ್ಲ. ಇದೀಗ ಕಾಂಗ್ರೆಸ್‌ನ ನೇತೃತ್ವ ವಹಿಸಿಕೊಂಡಿರುವ ಮುಖಂಡರಿಗೆ ಲಿಂಗಾಯತ ಸ್ವತಂತ್ರ ಧರ್ಮದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲ. ಬಹುತೇಕರು ವೈದಿಕ ಶಕ್ತಿಗಳಿಗೆ ತಮ್ಮ ಮೆದುಳನ್ನು ಒಪ್ಪಿಸಿಕೊಂಡವರು. ಚುನಾವಣೆಯ ಲಾಭ ನಷ್ಟಗಳ ದೃಷ್ಟಿಯಿಂದಷ್ಟೇ ಅವರು ಈ ವಿದ್ಯಮಾನವನ್ನು ನೋಡಬಲ್ಲರು. ಇನ್ನು ಮೈತ್ರಿ ಸರಕಾರದ ನಾಯಕರಾಗಿರುವ ಕುಮಾರಸ್ವಾಮಿಯವರು ಆರಂಭದಲ್ಲೇ ಲಿಂಗಾಯತ ಧರ್ಮದ ಆಂದೋಲನಕ್ಕೆ ಆಕ್ಷೇಪ ಎತ್ತಿದವರು. ಅವರು ಬಸವಣ್ಣನ ಲಿಂಗಾಯತ ಧರ್ಮವನ್ನು ಅದೆಷ್ಟು ಬಾಲಿಶವಾಗಿ ಅರ್ಥ ಮಾಡಿಕೊಂಡಿದ್ದ್ದರೆಂದರೆ ‘‘ಹಾಗಾದರೆ ಒಕ್ಕಲಿಗರೂ ಸ್ವತಂತ್ರ ಧರ್ಮದ ಬೇಡಿಕೆ ಇಡಬಹುದು’’ ಎಂದು ಹೇಳಿಕೆ ನೀಡಿದ್ದರು. ಕುಮಾರಸ್ವಾಮಿಯವರೂ ವೈದಿಕ ಸ್ವಾಮೀಜಿಗಳ ಸೂತ್ರಕ್ಕೆ ತಕ್ಕಂತೆ ಕುಣಿಯುವವರಾಗಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮ ರಾಜ್ಯದಲ್ಲಿ ರಾಜಕೀಯ ಒತ್ತಾಸೆಯನ್ನು ಕಳೆದುಕೊಂಡಿದೆ. ಬಿಜೆಪಿಯಂತೂ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎನ್ನುವ ಮಾನ್ಯತೆ ನೀಡುವ ಸಾಧ್ಯತೆಯೇ ಇಲ್ಲ. ಲಿಂಗಾಯತರ ಬಹುತೇಕ ಯುವಕರನ್ನು ಈಗಾಗಲೇ ಆರೆಸ್ಸೆಸ್‌ನ ವೈದಿಕ ಮನಸ್ಸುಗಳು ದಾರಿ ತಪ್ಪಿಸಿವೆ. ವೀರಶೈವರ ಮೂಲಕ ಲಿಂಗಾಯತ ಧರ್ಮದ ಮೂಲ ಸ್ವರೂಪವನ್ನು, ಚಿಂತನೆಗಳನ್ನೇ ಭ್ರಷ್ಟಗೊಳಿಸುವಲ್ಲಿ ಯಶಸ್ವಿಯಾಗಿರುವ ವೈದಿಕ ಮನಸ್ಸುಗಳು ಇದೀಗ ಲಿಂಗಾಯತ ಧರ್ಮ ತನ್ನ ಸ್ವಂತಿಕೆಯನ್ನು ಕಂಡುಕೊಳ್ಳುವುದು ಆರೆಸ್ಸೆಸ್ ಪ್ರತಿಪಾದಿಸುವ ‘ಹಿಂದುತ್ವ’ಕ್ಕೆ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಳುಹಿಸಿರುವ ಪ್ರಸ್ತಾವವನ್ನು ಕೇಂದ್ರ ಸರಕಾರ ಅಂಗೀಕರಿಸುವ ಯಾವ ಸಾಧ್ಯತೆಗಳೂ ಇಲ್ಲ. ಕಳೆದ ಚುನಾವಣೆಯಲ್ಲೇ ಅಮಿತ್ ಶಾ ‘‘ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಒಡೆಯಲು ಬಿಡುವುದಿಲ್ಲ’’ ಎಂದು ಘೋಷಿಸಿರುವುದರಿಂದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಕೇಂದ್ರ ಸರಕಾರದಿಂದ ಯಾವ ಧನಾತ್ಮಕ ಫಲಿತಾಂಶವನ್ನೂ ನಿರೀಕ್ಷಿಸುವಂತಿಲ್ಲ.

ಹಾಗೆ ನೋಡಿದರೆ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ರಾಜಕೀಯ ಪ್ರೇರಿತವೋ ಅಥವಾ ಅದು ನಿಜವಾದ ಜನಾಂದೋಲನವೋ ಎನ್ನುವುದನ್ನು ಸ್ಪಷ್ಟ ಪಡಿಸುವುದಕ್ಕೆ ಇದು ಒಳ್ಳೆಯ ಸಂದರ್ಭವಾಗಿದೆ. ಈ ಆಂದೋಲನದ ಹಿಂದೆ ರಾಜಕೀಯ ಪಕ್ಷಗಳ ನಾಯಕರೂ ಸೇರಿಕೊಂಡಿದ್ದುದರಿಂದ, ಆಂದೋಲನಕ್ಕೆ ಪಕ್ಷ ರಾಜಕೀಯದ ಕಳಂಕ ಅಂಟಿತ್ತು. ಈ ಆಂದೋಲನಕ್ಕೂ ಚುನಾವಣೆಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರು ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಹೊಣೆಗಾರಿಕೆ ಲಿಂಗಾಯತ ನಾಯಕರಿಗಿದೆ. ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಎಂ. ಬಿ. ಪಾಟೀಲ್, ಸರಕಾರದಲ್ಲಿ ಮಹತ್ವದ ಸ್ಥಾನವನ್ನು ತನ್ನದಾಗಿಸಲು ಒದ್ದಾಡುತ್ತಿದ್ದಾರೆ. ಬಹುಶಃ ಕಾಂಗ್ರೆಸ್ ಪಕ್ಷ ಲಿಂಗಾಯತ ಸ್ವತಂತ್ರ ಧರ್ಮದ ಜೊತೆಗೆ ಅಂತರ ಕಾಯ್ದುಕೊಳ್ಳುವ ಕಾರಣದಿಂದಲೇ ಎಂ. ಬಿ. ಪಾಟೀಲ್ ಸೇರಿದಂತೆ ಹೋರಾಟದಲ್ಲಿ ಗುರುತಿಸಿಕೊಂಡ ನಾಯಕರನ್ನು ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಂ. ಬಿ. ಪಾಟೀಲ್, ರಾಜಕೀಯದಿಂದ ಹೊರಬಂದು ಪೂರ್ಣ ಪ್ರಮಾಣದಲ್ಲಿ ಲಿಂಗಾಯದ ಸ್ವತಂತ್ರ ಧರ್ಮ ಆಂದೋಲನದಲ್ಲಿ ಭಾಗಿಯಾಗಬೇಕಾಗಿದೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟವನ್ನು ಯಾವುದೇ ಪಕ್ಷ ನಿಯಂತ್ರಿಸುತ್ತಿಲ್ಲ. ಬದಲಿಗೆ, ಲಿಂಗಾಯತ ತತ್ವ, ಸಿದ್ಧಾಂತಗಳೇ ಈ ಹೋರಾಟವನ್ನು ಅನಿವಾರ್ಯವಾಗಿಸಿದೆ ಎನ್ನುವುದನ್ನು ಮೊದಲು ನಾಡಿಗೆ ಸ್ಪಷ್ಟಪಡಿಸುವ ಅಗತ್ಯವಿದೆ. ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮ ಲಿಂಗಾಯತ. ಇದು ಪ್ರತಿಪಾದಿಸುವ ದೇವರು, ಸಿದ್ಧಾಂತಗಳು ವೈದಿಕ ಧರ್ಮಕ್ಕಿಂತ ಸಂಪೂರ್ಣ ಭಿನ್ನ. ಇಲ್ಲಿ ಜಾತಿಗಳಿಲ್ಲ. ವಿಗ್ರಹಾರಾಧನೆಗಳಿಲ್ಲ. ಮಠ, ಮಂದಿರಗಳಿಲ್ಲ. ಗೊಡ್ಡು ಪುರಾಣಗಳಿಲ್ಲ. ಧಾರ್ಮಿಕ ಆಚರಣೆಗಳಿಗೆ ಬ್ರಾಹ್ಮಣರನ್ನು ನೆಚ್ಚಿಕೊಂಡಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಧರ್ಮ ಲಿಂಗಾಯತ ಧರ್ಮ. ವೀರಶೈವ ಧರ್ಮಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೀರಶೈವ ಧರ್ಮ ವೈದಿಕ ಧರ್ಮದ ಕವಲುಗಳಲ್ಲಿ ಒಂದು. ಶೈವ ಪಂಥದ ಶಾಖೆ. ವೀರಶೈವ ಧರ್ಮ ಕರ್ನಾಟಕಕ್ಕೆ ಕಾಲಿರಿಸಿದ ಬಳಿಕ ಉಂಟಾದ ಗೊಂದಲಗಳ ಕಾರಣದಿಂದ ಇಂದು ಲಿಂಗಾಯತ ಧರ್ಮ ತನ್ನ ಸ್ವಂತಿಕೆಯನ್ನು ಕಳೆದುಕೊಂಡು ವೈದಿಕ ಧರ್ಮದ ಊಳಿಗ ಮಾಡುತ್ತಿದೆ. ಈ ಊಳಿಗದ ವಿರುದ್ಧವೇ 12ನೇ ಶತಮಾನದಲ್ಲಿ ಬಸವಣ್ಣ ಹೋರಾಟ ಮಾಡಿದ್ದರು. ಇದೀಗ ಮತ್ತೆ ಅದೇ ಹೋರಾಟ ಮುಂದುವರಿಯಬೇಕಾಗಿದೆ. ಲಿಂಗಾಯತ ಧರ್ಮ ಸ್ವತಂತ್ರಗೊಳ್ಳುವುದೆಂದರೆ, ಅದು ಜಾತೀಯತೆಯ ವಿರುದ್ಧ ಕನ್ನಡ ಅಸ್ಮಿತೆ ಸಾಧಿಸುವ ಗೆಲುವಾಗಿದೆ. ಸಂಘಪರಿವಾರದ ಬ್ರಾಹ್ಮಣ ಪ್ರೇರಿತ ಹಿಂದುತ್ವಕ್ಕೆ ಕನ್ನಡ ಧರ್ಮ ತೋರುವ ಪ್ರತಿರೋಧವೂ ಆಗಿದೆ. ಈ ಎಲ್ಲ ಕಾರಣಗಳಿಂದ, ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತನ್ನೆಲ್ಲ ಶಕ್ತಿಯೊಂದಿಗೆ ಆಂದೋಲನ ಮತ್ತೆ ಆರಂಭವಾಗಬೇಕಾಗಿದೆ. ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ನೀಡಲೇಬೇಕಾದ ಅನಿವಾರ್ಯತೆಯನ್ನು ಈ ಮೂಲಕ ಸೃಷ್ಟಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News