×
Ad

ಮಡಿಕೇರಿ: ಮಲ್ಲಂಗೆರೆ ಹಾಡಿಗೆ ಜಿ.ಪಂ. ಸದಸ್ಯರು, ಅಧಿಕಾರಿಗಳ ಭೇಟಿ; ಗಿರಿಜನರ ಸಮಸ್ಯೆಗಳಿಗೆ ಸ್ಪಂಧಿಸುವ ಭರವಸೆ

Update: 2018-06-12 17:31 IST

ಮಡಿಕೇರಿ, ಜೂ.12 : ಹಾಡಿವಾಸಿಗಳು ಕುಡಿಯುವ ನೀರು ಮತ್ತು ವಾಸಿಸಲು ಮನೆಯ ಕೊರತೆ ಎದುರಿಸುತ್ತಿರುವ ಕಾನೂರು ಸಮೀಪದ ಮಲ್ಲಂಗೆರೆ ಗಿರಿಜನ ಹಾಡಿಗೆ ಜಿ.ಪಂ. ಸದಸ್ಯರಾದ ಬಿ.ಎನ್. ಪ್ರಥ್ಯು ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ವಿರಾಜಪೇಟೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮತ್ತು ಐ.ಟಿ.ಡಿ.ಪಿ. ಅಧಿಕಾರಿ ಚಂದ್ರಶೇಖರ್ ಮತ್ತು ಕಾನೂರು ಗ್ರಾ.ಪಂ. ಪಿ.ಡಿ.ಓ. ರಾಜೇಶ್ ಅವರೊಂದಿಗೆ ಮಂಗಳವಾರದಂದು ಮಲ್ಲಂಗೆರೆ ಹಾಡಿಗೆ ತೆರಳಿದ ಬಿ.ಎನ್. ಪ್ರಥ್ಯು ಅವರು ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಕಳೆದ ಹಲವಾರು ವರ್ಷಗಳಿಂದ ಮಲ್ಲಂಗೆರೆ ಗಿರಿಜನ ಹಾಡಿಯ ಸ್ಥಿತಿ ದಯನೀಯವಾಗಿದ್ದರೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಲ್ಲಿನ ಗಿರಿಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಜಿ.ಪಂ. ಸಭೆಗಳಲ್ಲಿ ಈ ಬಗ್ಗೆ ಎಷ್ಟೇ ಪ್ರಸ್ತಾಪಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಸಮಸ್ಯೆಗಳು ಇಂದಿಗೂ ಸಮಸ್ಯೆಗಳಾಗಿಯೇ ಉಳಿದುಕೊಂಡಿದೆ. ಮಳೆಗಾಲದಲ್ಲಿ ಇಲ್ಲಿನ ಗಿರಿಜನರ ಬದುಕು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೇ ನಾಚಿಕೆಗೇಡು ಎಂದು ಬಾಳೆಲೆ ಜಿ.ಪಂ. ಕ್ಷೇತ್ರದ ಸದಸ್ಯರಾದ ಬಿ.ಎನ್. ಪ್ರಥ್ಯು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವಿರಾಜಪೇಟೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಅವರು, ಮಲ್ಲಂಗೆರೆ ಗಿರಿಜನ ಹಾಡಿಯಲ್ಲಿ ಸಮಸ್ಯೆಗಳಿರುವುದು ನಿಜ. ಆದರೆ ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಬಹುದಾಗಿದೆ. ಮುಂದಿನ ವರ್ಷದೊಳಗಾಗಿ ಮಲ್ಲಂಗೆರೆ ಹಾಡಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯವನ್ನು ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಇದೀಗ ಕುಡಿಯುವ ನೀರಿನ ಕೊರತೆ ನೀಗಿಸಲು ಹಾಡಿಯಲ್ಲಿ ಕೂಡಲೇ ತೆರೆದ ಬಾವಿಯೊಂದನ್ನು ನಿರ್ಮಿಸಲಾಗುವುದು. ಮತ್ತೆ ಮುಂದಕ್ಕೆ ಇಲ್ಲಿ ಕುಡಿಯುವ ನೀರಿಗಾಗಿ ಕಿರು ನೀರು ಸರಬರಾಜು ಯೋಜನೆಯಡಿ ನೂತನವಾಗಿ ಘಟಕ ಆರಂಭಿಸಲು ಮೊದಲ ಆಧ್ಯತೆ ನೀಡಲಾಗುವುದು ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಯಣ್ಣ ಅವರು ತಿಳಿಸಿದರು. ಅಲ್ಲದೆ ಇಲ್ಲಿನ ಹಾಡಿವಾಸಿಗಳ ಪೈಕಿ 15ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ದೊರೆತಿದೆ. ಅದನ್ನು ಕೂಡಲೇ ಪರಿಶೀಲಿಸಿ ಅರ್ಹರಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿ ಹಸ್ತಾಂತರಿಸಲು ಸ್ಥಳದಲ್ಲಿದ್ದ ಕಾನೂರು ಗ್ರಾ.ಪಂ. ಪಿ.ಡಿ.ಓ. ರಾಜೇಶ್ ಅವರಿಗೆ ಜಯಣ್ಣ ಅವರು ಸೂಚಿಸಿದರು.

ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎನ್. ಪ್ರಥ್ಯು ಅವರು, ತನ್ನ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಲ್ಲಂಗೆರೆ ಗಿರಿಜನ ಹಾಡಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಕೂಡಲೇ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಅಲ್ಲದೆ ಇಲ್ಲಿನ ದುಸ್ಥಿತಿಗಳ ಕುರಿತು ಮಾಧ್ಯಮಗಳ ಮೂಲಕವೂ ಅಧಿಕಾರಿಗಳ ಗಮನ ಸೆಳೆದಿದ್ದೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಸ್ಪಂಧಿಸಿರುವ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಸ್ಥಿತಿಯ ನೈಜಾಂಶದ ಕುರಿತು ವರದಿ ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ನೀಡುವ ವರದಿಯನ್ನಾಧರಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸರಕಾರಕ್ಕೆ ವರದಿ ಕಳುಹಿಸಿ ಮಲ್ಲಂಗೆರೆ ಗಿರಿಜನ ಹಾಡಿಯ ಅಭಿವೃದ್ದಿಗಾಗಿ ವಿಶೇಷ ಅನುದಾನ ತರಿಸಲು ಪ್ರಯತ್ನಿಸುವ ಭರವಸೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿರುವುದಾಗಿ ಬಿ.ಎನ್. ಪ್ರಥ್ಯು ಅವರು ಹೇಳಿದರು. ಮಲ್ಲಂಗೆರೆ ಗಿರಿಜನ ಹಾಡಿಯ ದುಸ್ಥಿತಿಯ ಬಗ್ಗೆ ತಾನು ಕೂಡ ನೇರವಾಗಿ ಸರಕಾರದ ಗಮನ ಸೆಳೆಯುವುದಾಗಿ ಇದೇ ವೇಳೆ ತಿಳಿಸಿದರು.

ಕುಡಿಯುವ ನೀರಿಗಾಗಿ ಜಿ.ಪಂ. ನಲ್ಲಿ ಅನುದಾನ ಕೊರತೆ ಎದುರಾಗಿದೆ. ರಾಜ್ಯ ಸರಕಾರ ತನ್ನ ಮಿತಿಯಲ್ಲಿ ಅನುದಾನ ನೀಡಿತ್ತಿದ್ದರೂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಇದು ಸಾಕಾಗುತ್ತಿಲ್ಲ. ಅದ್ದರಿಂದ ಸಂಸದರು ಕೂಡಲೆ ಇತ್ತ ಗಮನ ಹರಿಸಿ ಕುಡಿಯುವ ನೀರಿಗಾಗಿ ಕೇಂದ್ರದ ಅನುದಾನ ಒದಗಿಸಲು ಮಧ್ಯೆಪ್ರವೇಶಿಸುವಂತೆ ಬಿ.ಎನ್.ಪ್ರಥ್ಯು ಅವರು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News