ದಕ್ಷಿಣ ಕೊಡಗಿನಲ್ಲಿ ಮಳೆ ತೀವ್ರ: ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ
ಮಡಿಕೇರಿ, ಜೂ.12 : ಕೊಡಗು ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ಮಡಿಕೇರಿಯಲ್ಲಿ ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ದಕ್ಷಿಣ ಕೊಡಗು ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ ಮತ್ತು ಸೇತುವೆಗಳಿಗೆ ಹಾನಿಯಾಗಿದೆ.
ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಹರಿಹರ-ಟಿ.ಶೆಟ್ಟಿಗೇರಿ ರಸ್ತೆಯ ಸಂಪರ್ಕ ಕಡಿತಗೊಂಡಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಅಪಾಯದ ಮಟ್ಟವನ್ನು ಮೀರಿ ಲಕ್ಷ್ಮಣ ತೀರ್ಥ ನದಿ ಸೇತುವೆ ಮೇಲೆ ಹರಿಯುತ್ತಿರುವುದರಿಂದ ವಾಹನ ಸಂಚಾರ ಅಸಾಧ್ಯವಾಗಿದೆ.
ದಕ್ಷಿಣ ಕೊಡಗಿನ ಬಾಳೆಲೆ ಗ್ರಾ.ಪಂ ವ್ಯಾಪ್ತಿಯ ಕೊಟ್ಟಗೇರಿ, ಬಾಳೆಲೆ ದೋಣಿ ಕಡವು ಎಂಬಲ್ಲಿ ಸಂಪರ್ಕ ರಸ್ತೆಗೆ ಹಾನಿಯಾಗಿದ್ದು, ಈ ಭಾಗದಲ್ಲಿ ವಾಹನ ಸಂಚಾರ ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಭಾಗದ ಕಾಂಕ್ರಿಟ್ ರಸ್ತೆಯ ಒಂದು ಭಾಗ ಕುಸಿದಿದ್ದು, ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಸ್ಥಳಕ್ಕೆ ಬಾಳೆಲೆ ಗ್ರಾ.ಪಂ ಉಪಾಧ್ಯಕ್ಷರಾದ ಕೊಕ್ಕೆಂಗಡ ರಂಜನ್, ಭೇಟಿ ನೀಡಿದ್ದರು. ಮುಂಜಾಗೃತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಬಲ್ಯಮುಂಡೂರು ಗ್ರಾ.ಪಂ ವ್ಯಾಪ್ತಿಯ ಮುಗುಟಗೇರಿ ಕಾಲೋನಿ ನಿವಾಸಿಗಳಾದ ಹೆಚ್.ಎಸ್.ಪ್ರವೀಣ ಹಾಗೂ ಹೆಚ್.ಎಸ್.ಪ್ರಕಾಶ್ ಎಂಬುವರ ಮನೆಯ ಮಧ್ಯ ಭಾಗಕ್ಕೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಪ್ರವೀಣ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಸ್ಥಳೀಯ ಮುಖಂಡರಾದ ಕಂದಾ ಸುಬ್ಬಯ್ಯ ಹಾಗೂ ಕಂದಾಯ ಅಧಿಕಾರಿಗಳಾದ ನಿಶಾಂತ್, ನಿತಿನ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ದಕ್ಷಿಣ ಕೊಡಗಿನಲ್ಲಿ ಮಳೆ ತೀವ್ರತೆಯನ್ನು ಪಡೆದುಕೊಂಡ ಕಾರಣ ಮಂಗಳವಾರ ವಿರಾಜಪೇಟೆ ತಾಲೂಕು ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಭಾಗಮಂಡಲದಲ್ಲಿ ಮಳೆ ಕಡಿಮೆ
ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಶಾಸಕರ ಭೇಟಿ
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ಕೂಡ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮನೆ ಕಳೆದು ಕೊಂಡವರಿಗೆ ಪರಿಹಾರದ ಭರವಸೆ ನೀಡಿದರು. ಬೇತ್ರಿ, ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಭಾರೀ ಗಾಳಿ ಮಳೆಗೆ ಮರದ ಕೊಂಬೆ ಬಿದ್ದು ಮೃತಪಟ್ಟ ಬೆಳೆಗಾರ ಅಹಮ್ಮದ್ ಕುಟ್ಟಿ ಹಾಜಿ ಅವರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮಳೆಹಾನಿ ಬಗ್ಗೆ ಸಮಗ್ರ ವರದಿಯನ್ನು ತಯಾರಿಸುವಂತೆ ಸೂಚಿಸಿದರು.
ಅಪಾಯದಂಚಿನಲ್ಲಿ ಶಾಲೆ
ಮಡಿಕೇರಿ ತಾಲೂಕಿನ ಕ್ಲೋಸ್ಬರ್ನ್ ಶಾಲೆ ಶಿಥಿಲಾವಸ್ಥೆಗೆ ತಲುಪಿದ್ದು, ಛಾವಣಿ ಇಂದೋ ನಾಳೆಯೊ ಬೀಳುವ ಸ್ಥಿತಿಯಲ್ಲಿದೆ. ಭಾರೀ ಗಾಳಿ ಮಳೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ಆತಂಕವನ್ನು ಎದುರಿಸುತ್ತಿದ್ದಾರೆ. ಅನಾಹುತ ಸಂಭವಿಸುವ ಮೊದಲು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯ ಮಳೆ ವಿವರ
ಕೊಡಗು ಜಿಲ್ಲೆಯ ದಕ್ಷಿಣ ಭಾಗ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ 216 ಮಿ.ಮೀ.(21 ಸೆಂಟಿ ಮೀಟರ್) ದಾಖಲೆಯ ಮಳೆಯಾಗಿದೆ. ಉಳಿದಂತೆ ಶ್ರೀಮಂಗಲದಲ್ಲಿ 179 ಮಿ.ಮೀ. ಶಾಂತಳ್ಳಿ 171 ಮಿ.ಮೀ. ನಾಪೋಕ್ಲು 126 ಮಿ.ಮೀ. ಸೋಮವಾರಪೇಟೆ 138.20 ಮಿ.ಮೀ. ಹಾಗೂ ಶನಿವಾರಸಂತೆಯಲ್ಲಿ 100 ಮಿ.ಮೀ.ನಷ್ಟು ವ್ಯಾಪಕ ಮಳೆಯಾಗಿದೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 85.52 ಮಿ.ಮೀ. ಕಳೆದ ವರ್ಷ ಇದೇ ದಿನ 36.98 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 847.01 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 406.66 ಮಿ.ಮೀ ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 2815.28 ಅಡಿ ಆಗಿದೆ. ಕಳೆದ ವರ್ಷ ಇದೇ ದಿನ 2809.76 ಅಡಿ ಆಗಿತ್ತು. ಹಾರಂಗಿಯಲ್ಲಿ ಬಿದ್ದ ಮಳೆ 11.80 ಮಿ.ಮೀ. ಕಳೆದ ವರ್ಷ ಇದೇ ದಿನ 9.20 ಮಿ.ಮೀ. ಆಗಿತ್ತು. ಇಂದಿನ ನೀರಿನ ಒಳ ಹರಿವು 7260 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1352 ಕ್ಯುಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್.