×
Ad

50 ಸಾವಿರ ರೂ. ಠೇವಣಿಯಿಟ್ಟರೆ ಕೂಡಲೇ ನಿವೇಶನ: ಸಚಿವ ಯು.ಟಿ.ಖಾದರ್

Update: 2018-06-12 18:18 IST

ಬೆಂಗಳೂರು, ಜೂ.12: ಕರ್ನಾಟಕ ಗೃಹ ಮಂಡಳಿ ಫ್ಲಾಟ್ ಗಳನ್ನು ಪಡೆಯಲು ವಿಧಿಸಿದ್ಧ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಕೇವಲ 50ಸಾವಿರ ರೂ.ಠೇವಣಿ ಇಟ್ಟು ಗೃಹ ಮಂಡಳಿಯ ನಿವೇಶನಗಳನ್ನು ಕೂಡಲೇ ಪಡೆಯಬಹುದೆಂದು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಮಂಗಳವಾರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಮಂಡಳಿ ವತಿಯಿಂದ ನಿರ್ಮಿಸಿರುವ ನಿವೇಶನಗಳನ್ನು ಖರೀದಿಸುವವರೇ ಇಲ್ಲ ಎಂಬ ಅಪವಾದಗಳಿವೆ. ಇಂತಹ ಅಪವಾದಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಗೃಹ ಮಂಡಳಿಯ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ ಎಂದು ಹೇಳಿದರು.

ಈ ಹಿಂದೆ ಕೆಎಚ್‌ಬಿ ನಿವೇಶನ ಪಡೆಯಲು ಐದು ವರ್ಷ ಬೆಂಗಳೂರಿನಲ್ಲಿ ವಾಸವಿರಬೇಕು, 90 ಸಾವಿರ ರೂ. ಠೇವಣಿ ಇಡಬೇಕು. ಆದಾಯ ಮಿತಿಗೊಳಪಟ್ಟಿರಬೇಕೆಂಬ ನಿಬಂಧನೆಗಳನ್ನೆಲ್ಲ ಸಡಿಲಗೊಳಿಸಲಾಗಿದೆ. ಹಾಗೂ ಖಾಸಗಿ ಸಂಸ್ಥೆಗಳು ನಿರ್ಮಿಸುವ ನಿವೇಶನಕ್ಕೂ ಮಿಗಿಲಾಗಿ ಗೃಹ ಮಂಡಳಿಯ ನಿವೇಶನಗಳು ಸುಸಜ್ಜಿತವಾಗಿರುವಂತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಸರಕಾರ ಪ್ರಾರಂಭದ ಹಂತದಲ್ಲಿ ಅನುದಾನ ನೀಡುವುದಿಲ್ಲ. ಹೀಗಾಗಿ ಫಲಾನುಭವಿಗಳು ಮನೆಕಟ್ಟಿಕೊಳ್ಳಲು ವಿಳಂಬವಾಗುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸುವ ಸಲುವಾಗಿ ಫಲಾನುಭವಿಗಳು ಸ್ಥಳೀಯ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಮನೆಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ. ಈ ಬ್ಯಾಂಕ್ ಸಾಲವನ್ನು ಸರಕಾರ ಫಲಾನುಭವಿಗಳಿಗೆ ನೀಡುವ ಅನುದಾನದಡಿಯಲ್ಲಿ ತೀರಿಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ಗೃಹ ಮಂಡಳಿ ವತಿಯಿಂದ ಈ ವರೆಗೂ ಜಿ+3 ಫ್ಲಾಟ್ ಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಜಿ+14 ಫ್ಲಾಟ್ ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಿಂದ ಹೆಚ್ಚಿನ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಮುಖ್ಯವಾಗಿ ಬಹುಮಹಡಿ ಕಟ್ಟಡಗಳನ್ನು ಬೆಂಗಳೂರು, ಮಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಿದ್ಧತೆಯಲ್ಲಿ ತೊಡಗಿದ್ದೇವೆ. ಈ ಯೋಜನೆಯ ಜಾರಿ ಹಾಗೂ ಉಸ್ತುವಾರಿಗೆ ಆಯುಕ್ತರೊಬ್ಬರನ್ನು ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ಗೃಹ ಮಂಡಳಿ, ಬಿಡಿಎ ಸೇರಿದಂತೆ ಸರಕಾರಿ ಹಾಗೂ ಖಾಸಗಿ ಸ್ವಾಮ್ಯದ ವಸತಿ ನಿರ್ಮಾಣ ಸಂಸ್ಥೆಗಳು ರೇರ(ರಿಯಲ್ ಎಸ್ಟೇಟ್ ನಿಯಂತ್ರಣ) ಕಾಯ್ದೆಗೆ ಒಳಪಡಬೇಕು. ಕಾಯ್ದೆಯಿಂದ ಹೊರಗುಳಿದ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಯು.ಟಿ.ಖಾದರ್ ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News