ಒಬ್ಬ ವ್ಯಕ್ತಿಯೂ ಊಟವಿಲ್ಲದೆ ಹಸಿದು ಮಲಗಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ: ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು,ಜೂ.12: ಸೋಲಿಗೆ ಹೆದರುವುದಿಲ್ಲ, ಆದರೆ ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದರೂ ಏಕೆ ಸೋಲಾಯಿತು ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾವುಕರಾದರು.
ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ನಾನು ಸೋಲಿಗೆ ಹೆದರುವವನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಇಷ್ಟೆಲ್ಲಾ ಕೆಲಸ ಮಾಡಿದ್ದರೂ ಜನ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಈ ರೀತಿ ಮಾಡಿದ್ದಾರೆ ಎನಿಸುತ್ತದೆ. ಆದರೆ ಬಡವರು, ದಲಿತರು, ಹಿಂದುಳಿದವರು ಹಾಗೂ ರೈತರಿಗೆ ಆರ್ಥಿಕ ಶಕ್ತಿ ತುಂಬಿದ ತೃಪ್ತಿ ನನಗಿದೆ ಎಂದು ಹೇಳಿದರು.
ನಾನು ರಾಜಕೀಯ ಪ್ರಾರಂಭ ಮಾಡಿದಾಗ ನನ್ನ ಮನಸ್ಥಿತಿ ಹೇಗಿತ್ತೋ, ನಾನು ರಾಜ್ಯದ ಮುಖ್ಯಮಂತ್ರಿ ಆದಾಗಲೂ ಅದೇ ಮನಸ್ಥಿತಿಯನ್ನು ಹೊಂದಿದ್ದೆ. ಈಗಲೂ ಅದೇ ಮನಸ್ಥಿತಿಯನ್ನು ಇಟ್ಟುಕೊಂಡಿದೇನೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲು ಗೆಲುವು ಎರಡನ್ನೂ ಕಂಡಿದ್ದೇನೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ನನ್ನ ಬೆಂಬಲಿಗರು, ಹಿತೈಷಿಗಳ ಪರವಾಗಿ ಇದ್ದು ಕೆಲಸ ಮಾಡುತ್ತೇನೆ ಎಂದರು.
ಜನರ ತೀರ್ಪಿಗೆ ತಲೆಬಾಗುತ್ತೇನೆ. ಅಂಬೇಡ್ಕರ್, ಇಂದಿರಾ ಗಾಂಧಿಯವರನ್ನೇ ಜನ ಸೋಲಿಸಿದ್ದರು. ಇತಿಹಾಸವನ್ನು ನೋಡಿದರೆ ಒಳ್ಳೆಯವರಿಗೆ ಕಷ್ಟ ಬರುವುದು ಸಾಮಾನ್ಯ. ರಾಜ್ಯದ ಜನ ನಮ್ಮ ಕುಟುಂಬವಿದ್ದಂತೆ, ಅವರ ಪರ ಸದಾಕಾಲ ಇರುವುದಾಗಿ ತಿಳಿಸಿದರು.
ಸಿದ್ದರಾಮಯ್ಯ ಹಿಂದೂ ವಿರೋಧಿ, ಲಿಂಗಾಯಿತ ಧರ್ಮ ಹೊಡೆದ ಎಂದೆಲ್ಲಾ ಅಪಪ್ರಚಾರ ಮಾಡಿದರು. ನಾನು ಎಂದೂ ಲಿಂಗಾಯತ ಧರ್ಮ ಹೊಡೆದವನಲ್ಲ. ಎಂಟನೂರು ವರ್ಷಗಳ ಹಿಂದೆಯೇ ಬಸವಣ್ಣ ಲಿಂಗಾಯತ ಧರ್ಮ ಮಾಡಿದ್ದರು. ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ ಅಷ್ಟೇ. ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ಮನುಷ್ಯ ಸಂಬಂಧದಲ್ಲಿ ನಂಬಿಕೆ, ಮಾನವೀಯತೆಯಲ್ಲಿ ನಂಬಿಕೆ ಇಟ್ಟವನು. ನಾನೇನು ಇಂತಹದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಹಸಿವು ಮುಕ್ತ ರಾಜ್ಯದ ಕಲ್ಪನೆಯೊಂದಿಗೆ ಕಟ್ಟಕಡೆಯ ವ್ಯಕ್ತಿಯೂ ಒಂದು ಹೊತ್ತು ಊಟ ಇಲ್ಲದೆ ಹಸಿದು ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯದಂತಹ ಮಹತ್ತರ ಯೋಜನೆ ಜಾರಿಗೆ ತಂದೆ. ಅನ್ನಭಾಗ್ಯ, ಮನಸ್ವಿನಿ, ಮೈತ್ರಿ, ಕೃಷಿಭಾಗ್ಯ, ರೈತರ ಸಾಲ ಮನ್ನಾ, ವಿದ್ಯಾಸಿರಿ, ಗರ್ಭಿಣಿ ಬಾಣಂತಿಯರಿಗೆ ಪೌಷ್ಠಿಕ ಆಹಾರ, ಶಾಲಾ ಮಕ್ಕಳಿಗೆ ಹಾಲು, ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ ವರೆಗೆ ಉಚಿತ ಶಿಕ್ಷಣ, ಲ್ಯಾಪ್‍ಟಾಪ್, ಉಚಿತ ಬಸ್ ಪಾಸ್, ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಜನಾಂಗದವರಿಗೆ ಶೇ.50 ರಷ್ಟು ಮೀಸಲಾತಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಎಸ್‍ಸಿಪಿ ಎಸ್‍ಟಿಪಿ ಯೋಜನೆಗೆ ಕಾನೂನು ತಂದು ಎಸ್ಸಿ ಎಸ್ಟಿಗಳಿಗೆ ಆರ್ಥಿಕ ಶಕ್ತಿ ತುಂಬಿದ್ದೇನೆ. ಇಷ್ಟೆಲ್ಲಾ ಓಟಿಗಾಗಿ ಮಾಡಿದ್ದಲ್ಲ, ಕೇವಲ ಜನರ ಹಿತದೃಷ್ಟಿಯಿಂದ ಮಾಡಿದ್ದು ಎಂದರು.
ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಬಾಯಿಯೋ ಔರ್ ಬೆಹನೋ ಎಂದು ಭಾಷಣ ಬಿಗಿಯುತ್ತಾರೆ. ಬಿಜೆಪಿ ನಡಿಗೆ ದಲಿತರ ಮನೆಕಡೆಗೆ ಎಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹೋಟೆಲ್‍ನಿಂದ ತಿಂಡಿ ತರಿಸಿಕೊಂಡು ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಅನ್ನಭಾಗ್ಯ ಕೇಂದ್ರ ಸರಕಾರದ್ದು ಎಂದು ಹೇಳುವ ಬಿಜೆಪಿಯವರು ಬೇರೆ ರಾಜ್ಯಗಳಾದ ಗೋವಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಲ್ಲಿ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದು ನನ್ನ ಕನಸು. ಹಾಗಾಗಿ ರಾಜ್ಯದಲ್ಲಿ ಜಾರಿಗೆ ತಂದಿದ್ದೇನೆ ಎಂದು ಹೇಳಿದರು.
ಬಿಜೆಪಿಯವರು ಡೋಂಗಿಗಳು. ಅವರು ಎಂದೂ ಅಭಿವೃದ್ಧ ಬಯಸಿದವರಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಬರೀ ಸುಳ್ಳುಗಳನ್ನೆ ಹೇಳಿದರು. ಅಮಿತಾ ಶಾ ಕೂಡ ಅದನ್ನೇ ಮಾಡಿದರು. ರಾಜ್ಯದ ಜನ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿಲ್ಲ, ಬಿಜೆಪಿಯವರು ನಮಗಿಂತ ಹೆಚ್ಚಿನ ಸೀಟುಗಳನ್ನು ಪಡೆದರೂ ರಾಜ್ಯದ ಜನತೆ ನಮಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಬಿಜೆಪಿಯವರಿಗೆ ಸ್ಥಾನಗಳು ಜಾಸ್ತಿಯಾಯಿತು, ಮತಗಳು ಕಡಿಮೆಯಾದವು. ನಮಗೆ ಮತಗಳು ಜಾಸ್ತಿಯಾದವು, ಸ್ಥಾನಗಳು ಕಡಿಮೆಯಾದವು. ಇದನ್ನೇ ಪ್ರಜಾಪ್ರಭುತ್ವದ ಸೌಂದರ್ಯ ಎನ್ನುವುದು ಎಂದು ಹೇಳಿದರು.
ಈಗಾಗಲೇ ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಸೋಲುಂಟಾಗಿದೆ. 2019ಕ್ಕೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುತ ಪಡೆದು ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವರುಣಾ ಕ್ಷೇತ್ರದ ಜನರ ಋಣ ತೀರಿಸುವೆ: ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಅತ್ಯಧಿಕ 58 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ನಿಮಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಋಣವನ್ನು ಸ್ವಲ್ಪ ತೀರಿಸಿದ್ದೇನೆ. ಈಗ ಮತ್ತಷ್ಟು ಹೆಚ್ಚಾಗಿದೆ. ನಾನು ಮತ್ತು ನನ್ನ ಮಗ ನಿಮ್ಮ ಸೇವೆಯನ್ನು ಸದಾಕಾಲ ಮಾಡುತ್ತೇವೆ. ನಿಮಗೆ ಕೃತಜ್ಞತೆಗಳು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಧಾನಿಯಾಗುವಂತೆ ಜನರ ಒತ್ತಾಯ: ನೀವು ಲೋಕಸಭೆಗೆ ಸ್ಪರ್ಧೆಮಾಡಿ ದೇಶದ ಪ್ರಧಾನಿಯಾಗಬೇಕು ಎಂದು ಅಲ್ಲಿ ನೆರೆದಿದ್ದ ಅಭಿಮಾನಿಗಳು ಸಭೆಯ ಉದ್ದಕ್ಕೂ ಕೂಗುತ್ತಿದ್ದ ದೃಶ್ಯ ಕಂಡು ಬಂತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಹಿಸಿದ್ದರು. ಸಚಿವ ಪುಟ್ಟರಂಗಶೆಟ್ಟಿ, ಸಂಸದ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಆರ್.ಧರ್ಮಸೇನಾ, ಐವಾನ್ ಡಿಸೋಜ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಎ.ಆರ್.ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಸುನೀಲ್ ಬೋಸ್, ಕೆಪಿಸಿಸಿ ಸದಸ್ಯರಾದ ಅಕ್ಬರ್ ಅಲೀ, ಕಾಂಗ್ರೆಸ್ ಮುಖಂಡರಾದ ಎಸ್.ಸಿ.ಬಸವರಾಜು, ರಂಗಸ್ವಾಮಿ, ದೊರೆಸ್ವಾಮಿ, ಡಿ.ಧ್ರುವಕುಮಾರ್, ಗುರುಪಾದಸ್ವಾಮಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.