ಶಿರಾಡಿ ಘಾಟ್‌ಗೆ ಆಸ್ಕರ್ ಫೆರ್ನಾಂಡಿಸ್ ಹೆಸರಿಡಬೇಕು: ಸಚಿವ ಯು.ಟಿ.ಖಾದರ್

Update: 2018-06-12 15:22 GMT

ಬೆಂಗಳೂರು, ಜೂ.12: ಶಿರಾಡಿ ಘಾಟ್ ಮಾರ್ಗದ ರಸ್ತೆಯ ದುರಸ್ಥಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಜನತೆಯ ಬಹುದಿನಗಳ ಕನಸನ್ನು ನನಸು ಮಾಡಿದ ಕಾಂಗ್ರೆಸ್ ಮುಖಂಡ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೆಸರನ್ನು ಶಿರಾಡಿ ಘಾಟ್‌ಗೆ ಇಡಬೇಕೆಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರುನಿಂದ ಬೆಂಗಳೂರಿನ ಮಾರ್ಗ ಮಧ್ಯೆಯಿರುವ ಶಿರಾಡಿ ಘಾಟ್‌ ಸುಮಾರು 26 ಕಿಮೀ ಗುಡ್ಡಬೆಟ್ಟಗಳಿಂದ ಕೂಡಿದ್ದು, ವಾಹನ ಸಂಚಾರ ಅಪಾಯಕಾರಿಯಾಗಿತ್ತು. ಹೀಗಾಗಿ ಇಲ್ಲಿನ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಜನತೆ ಬಹುವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ, ಹಲವು ಮಂದಿ ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಲೇ ಬಂದಿದ್ದರು.

ಆದರೆ, ಜನತೆಯ ಮನವಿಗೆ ಪೂರಕವಾಗಿ ಸ್ಪಂಧಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶಿರಾಡಿಘಾಟ್ ರಸ್ತೆ ದುರಸ್ಥಿಗೆ 300 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ರಸ್ತೆ ದುರಸ್ಥಿಯು ಪ್ರಗತಿಯಲ್ಲಿದ್ದು, ಇನ್ನು ಕೆಲವೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಹೀಗಾಗಿ ಇದಕ್ಕೆ ಕಾರಣರಾದ ಆಸ್ಕರ್ ಫೆರ್ನಾಂಡಿಸ್ ಹೆಸರನ್ನು ಶಿರಾಡಿ ಘಾಟ್‌ಗೆ ಇಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News