ಸಚಿವ ಸ್ಥಾನ ಕೈ ತಪ್ಪಿದ್ದು ಬೇಸರ ತಂದಿದೆ: ಲಕ್ಷ್ಮಿ ಹೆಬ್ಬಾಳ್ಕರ್

Update: 2018-06-12 15:30 GMT

ಧಾರವಾಡ, ಜೂ.12: ಸಮ್ಮಿಶ್ರ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದು ಬೇಸರ ಉಂಟು ಮಾಡಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮಂಗಳವಾರ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ನಡೆದ ಬೆಳಗಾವಿ ವಿಭಾಗದ ಪರಿಶೀಲನಾ ಸಭೆಯ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಸಚಿವ ಸ್ಥಾನ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ನನಗೆ ಆಗಿರುವ ನೋವನ್ನು ಈಗಾಗಲೇ ಮಾಧ್ಯಮಗಳ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ನುಡಿದಂತೆ ನಡೆದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರಕಾರದಲ್ಲಿ ವಿಧಾನಪರಿಷತ್ತಿನ ಸದಸ್ಯರನ್ನು ಸಚಿವರನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಜಯಮಾಲಾರನ್ನು ಸಚಿವರನ್ನಾಗಿ ಮಾಡಿದ್ದಾರೆ. ಯಾವ ಮಾನದಂಡದ ಆಧಾರದ ಮೇಲೆ ಜಯಮಾಲಾರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಕಳೆದ 20 ವರ್ಷಗಳಿಂದ ದುಡಿದಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ. ಆದರೆ, ಈಗ ಅನ್ಯಾಯವಾಗಿದೆ ಅಷ್ಟೇ. ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷಕ್ಕೊಳಗಾಗಿಲ್ಲ. ಅವರು ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರನ್ನು ಸಂತೈಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News