183 ಏತ ನೀರಾವರಿ ಯೋಜನೆಗಳಿಗೆ ಮರು ಚಾಲನೆ: ಸಚಿವ ಸಿ.ಎಸ್.ಪುಟ್ಟರಾಜು

Update: 2018-06-12 15:46 GMT

ಬೆಂಗಳೂರು, ಜೂ.12: ರಾಜ್ಯದಲ್ಲಿ 400ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳು ಅಸ್ತಿತ್ವದಲ್ಲಿದ್ದು, ಈ ಪೈಕಿ 183 ಏತ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ಆದಷ್ಟು ಶೀಘ್ರದಲ್ಲೇ ಸ್ಥಗಿತವಾಗಿರುವ ಏತ ನೀರಾವರಿ ಯೋಜನೆಗಳಿಗೆ ಆದ್ಯತೆ ಮೇರೆಗೆ ಮರು ಚಾಲನೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 183 ಏತ ನೀರಾವರಿ ಯೋಜನೆಗಳಿಗೆ ಮರು ಚಾಲನೆ ನೀಡಲು 300 ಕೋಟಿ ರೂ.ಗಳ ಅನುದಾನ ಅಗತ್ಯವಿದ್ದು, ಈಗಾಗಲೆ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇನ್ನುಳಿದ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

25 ಕೆವಿಗಿಂತ ಕಡಿಮೆ ಸಾಮರ್ಥ್ಯದ ಏತ ನೀರಾವರಿ ಯೋಜನೆಗಳಿಗೆ ಸೋಲಾರ್ ಸಂಪರ್ಕ ಕಲ್ಪಿಸಿ, ನೀರು ಎತ್ತುವ ಕೆಲಸವನ್ನು ಮಾಡಲು ನಿರ್ಣಯ ಮಾಡಿದ್ದೇವೆ. ಈ ಹಿಂದೆ ನಾನು, ಸಿಎಂ ಕುಮಾರಸ್ವಾಮಿ ಜೊತೆಯಲ್ಲಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದೆ. ನಮ್ಮ ಇಲಾಖೆಯಲ್ಲಿ ಹೆಚ್ಚಿನ ರೀತಿಯಲ್ಲಿ ಹನಿ ನೀರಾವರಿಗೆ ಒತ್ತು ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಅಂತರ್ಜಲ ಹೆಚ್ಚಳ, ಉತ್ತಮವಾದ ರೀತಿಯಲ್ಲಿ ರಾಜ್ಯದ ಕೆರೆಗಳ ಸಂರಕ್ಷಣೆ ಮಾಡಲು ನಿರ್ಣಯ ಮಾಡಿದ್ದೇವೆ. ನಾನು ಸಂಸದನಾಗಿದ್ದಾಗ ಸಂಸದೀಯ ಸಮಿತಿಯ ಸಹಯೋಗದೊಂದಿಗೆ ರಾಜಸ್ಥಾನ ಪ್ರವಾಸ ಕೈಗೊಂಡಿದ್ದೆ. ಅಲ್ಲಿನ ಸಣ್ಣ ನೀರಾವರಿ ಇಲಾಖೆಯು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಶೀಘ್ರದಲ್ಲೇ ನಾನು ಹಾಗೂ ನಮ್ಮ ಇಲಾಖೆಯ ಅಧಿಕಾರಿಗಳ ತಂಡ ರಾಜಸ್ಥಾನಕ್ಕೆ ಅಧ್ಯಯನ ಪ್ರವಾಸ ಕೈಗೊಂಡು, ಅದನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸುವ ಕೆಲಸ ಮಾಡುತ್ತೇವೆ ಎಂದು ಪುಟ್ಟರಾಜು ತಿಳಿಸಿದರು.

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 10 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದ್ದು, ಈವರೆಗೆ 7.89 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 126 ಕೆರೆಗಳಿಗೆ 1347 ಕೋಟಿ ರೂ.ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಶೇ.75ರಷ್ಟು ಮುಗಿದಿದ್ದು, ಶೀಘ್ರದಲ್ಲೆ ಮುಖ್ಯಮಂತ್ರಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಆನೇಕಲ್ ತಾಲೂಕಿನಲ್ಲಿ 60 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಮುಂದಾಗಿದ್ದೇವೆ. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 65 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 260 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಪುಟ್ಟರಾಜು ತಿಳಿಸಿದರು.

ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನದಿಗಳ ಹರಿವು ಸಂರಕ್ಷಿಸಿ, 200 ಕೋಟಿ ರೂ.ವೆಚ್ಚದಲ್ಲಿ 53 ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ತಂದು ಜವಾಬ್ದಾರಿ ನಿರ್ವಹಿಸುವ ಕೆಲಸವನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ರಾಮನಗರ-ಚನ್ನಪಟ್ಟಣ ತಾಲೂಕುಗಳಿಗೆ ಬೈರಾಪಟ್ಟಣದಿಂದ ಸಂಸ್ಕರಿಸಿದ ನೀರನ್ನು 1000 ಕೋಟಿ ರೂ.ವೆಚ್ಚದಲ್ಲಿ ಎರಡು ತಾಲೂಕುಗಳ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನೆಲಮಂಗಲ, ದೊಡ್ಡಬಳ್ಳಾಪುರ ಭಾಗಕ್ಕೆ ಸಂಸ್ಕರಿಸಿದ ನೀರು ಸರಬರಾಜು ಮಾಡುವ ಯೋಜನೆಯನ್ನು 700 ಕೋಟಿ ರೂ.ಅನುದಾನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.

ಕೋಲಾರ ಜಿಲ್ಲೆಯ ಏತ ನೀರಾವರಿ ಯೋಜನೆಗೆ ಭೇಟಿ ನೀಡುವ ಮೂಲಕ ನಾಳೆಯಿಂದಲೆ ರಾಜ್ಯ ಪ್ರವಾಸ ಆರಂಭಿಸುತ್ತಿದ್ದೇನೆ. ರೈತ ಸಂಜೀವಿನಿ ಯೋಜನೆಯಡಿ ಕೆರೆಗಳಲ್ಲಿನ ಹೂಳು ತೆಗೆಯುವ ಕೆಲಸವನ್ನು ತಕ್ಷಣದಿಂದ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಹಿಂದಿನ ಸ್ಪೀಕರ್ ಕೆ.ಬಿ.ಕೋಳಿವಾಡ ಸರಕಾರಕ್ಕೆ ಸಲ್ಲಿಸಿರುವ ವರದಿಯ ಕುರಿತು ಕಾನೂನು ಇಲಾಖೆಯ ಸಲಹೆ ಪಡೆದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಮ್ಮ ರಾಜ್ಯದಲ್ಲಿ ಐದು ವರ್ಷಗಳ ಹಿಂದೆ 36 ಸಾವಿರ ಕೆರೆಗಳಿದ್ದವು, ಈಗ 29 ಸಾವಿರ ಕೆರೆಗಳಿವೆ. ಇರುವ ಕೆರೆಗಳನ್ನು ಉಳಿಸಿಕೊಂಡು ಹೋಗುತ್ತೇವೆ. ಯಾವುದೇ ಕಾರಣಕ್ಕೂ ಕೆರೆಗಳನ್ನು ನಾಶ ಮಾಡಲು ಅವಕಾಶ ನೀಡುವುದಿಲ್ಲ.
-ಸಿ.ಎಸ್.ಪುಟ್ಟರಾಜು, ಸಣ್ಣ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News