ಸಿದ್ದರಾಮಯ್ಯ ನೀಡಿದ ಭಿಕ್ಷೆ ನಾನು ಸಚಿನಾಗಲು ಕಾರಣ: ಸಚಿವ ಪುಟ್ಟರಂಗಶೆಟ್ಟಿ
ಮೈಸೂರು,ಜೂ.12: ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ನಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರು ಕೊಟ್ಟ ಬಿಕ್ಷೆ ನಾನು ಸಚಿವನಾಗಲು ಕಾರಣ ಎಂದು ಪುಟ್ಟರಂಗಶೆಟ್ಟಿ ಹೇಳಿದರು.
ವರುಣಾ ವಿಧಾನ ಸಭಾ ಕ್ಷೇತ್ರದ ಮತದಾರರಿಗೆ ನಡೆದ ಕೃತಜ್ಞತಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ಉಪ್ಪಾರ ಸಮಾಜದ ಒಬ್ಬ ಪ್ರತಿನಿಧಿ ಇಂದು ಶಾಸಕ, ಮಂತ್ರಿಯಾಗಿದ್ದಾನೆ ಎಂದರೆ ಅದಕ್ಕೆ ಕಾರಣ ಸಿದ್ದರಾಮಯ್ಯ. ಅವರು ಕೊಟ್ಟ ಭಿಕ್ಷೆ ನಾನು ಶಾಸಕನಾಗಿ ಮಂತ್ರಿಯಾಗಲು ಕಾರಣವಾಯಿತು ಎಂದರು.
ಅತೀ ಹಿಂದುಳಿದ ಸಮಾಜ ನಮ್ಮದು. ಸ್ವತಂತ್ರ ಬಂದು 70 ವರ್ಷಗಳಾದರೂ ಯಾವುದೇ ರಾಜಕೀಯ ಪಕ್ಷಗಳು ನಮ್ಮನ್ನು ಗುರುತಿಸದ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುತಿಸಿ 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದರು. ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿಯೇ ಇರುತ್ತಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಲು ಸಾಧ್ಯವಾಗುತ್ತಿಲ್ಲ, ಇನ್ನೂ ಹತ್ತು ವರ್ಷ ಕಳೆದರೂ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ. ರಾಜ್ಯಕ್ಕೆ ಮತ್ತು ದೇಶಕ್ಕೆ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆ.
-ಐವಾನ್ ಡಿಸೋಜ, ವಿಧಾನ ಪರಿಷತ್ ಸದಸ್ಯ.