ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ತುಂಗಾ, ಭದ್ರಾ, ಲಿಂಗನಮಕ್ಕಿ ಡ್ಯಾಂಗಳಿಗೆ ಹೆಚ್ಚಿದ ಒಳಹರಿವು

Update: 2018-06-12 17:11 GMT

ಶಿವಮೊಗ್ಗ, ಜೂ.12: ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ವರ್ಷಧಾರೆ ಮುಂದುವರಿದಿದೆ. ಜಲಾನಯನ ವ್ಯಾಪ್ತಿಯ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯಗಳ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಡ್ಯಾಂಗಳ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. 

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ 48.66 ಮಿಲಿ ಮೀಟರ್ (ಮಿ.ಮೀ.) ಆಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು, 231.80 ಮಿ.ಮೀ. ಮಳೆಯಾಗಿದೆ. 

ಶಿವಮೊಗ್ಗದಲ್ಲಿ 5.60 ಮಿ.ಮೀ., ಭದ್ರಾವತಿ 16 ಮಿ.ಮೀ., ಸಾಗರ 38 ಮಿ.ಮೀ., ಶಿಕಾರಿಪುರ 1.80 ಮಿ.ಮೀ., ಸೊರಬ 12 ಮಿ.ಮೀ. ಹಾಗೂ ಹೊಸನಗರದಲ್ಲಿ 34 ಮಿ.ಮೀ. ಮಳೆಯಾಗಿದೆ. ಉಳಿದಂತೆ ಘಟ್ಟ ಪ್ರದೇಶಗಳಾದ ಹುಲಿಕಲ್ಲು, ಮಾಣಿ, ಯಡೂರು, ಆಗುಂಬೆ, ನಗರ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. 

ಡ್ಯಾಂ ವಿವರ: ಜಲಾನಯನ ಪ್ರದೇಶವಾದ ಶೃಂಗೇರಿ, ತೀರ್ಥಹಳ್ಳಿ ತಾಲೂಕುಗಳ ಸುತ್ತಮುತ್ತ ಭಾರೀ ವರ್ಷಧಾರೆಯಾಗುತ್ತಿರುವ ಕಾರಣದಿಂದ ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿದೆ. ಇದರಿಂದ ಗಾಜನೂರಿನ ತುಂಗಾ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. 

ಮಂಗಳವಾರದ ಮಾಹಿತಿಯಂತೆ ತುಂಗಾ ಡ್ಯಾಂಗೆ 47,651 ಕ್ಯೂಸೆಕ್ ಒಳಹರಿವಿದ್ದು, ಅಷ್ಟೆ ಪ್ರಮಾಣದ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ತುಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

ಭದ್ರಾ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಡ್ಯಾಂನಲ್ಲಿ 4 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂನ ನೀರಿನ ಮಟ್ಟ 122.80 (ಗರಿಷ್ಠ ಮಟ್ಟ : 186) ಅಡಿಯಿದೆ. ಒಳಹರಿವು 22,231 ಕ್ಯೂಸೆಕ್ ಇದೆ. 194 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

ಉಳಿದಂತೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನಲ್ಲಿ ಒಂದೇ ದಿನದಲ್ಲಿ 1 ಅಡಿ ನೀರು ಸಂಗ್ರಹವಾಗಿದೆ. ಪ್ರಸ್ತುತ ನೀರಿನ ಮಟ್ಟ 1755.80 (ಗರಿಷ್ಠ ಮಟ್ಟ: 1819) ಅಡಿಯಿದೆ. 18,973 ಕ್ಯೂಸೆಕ್ ಒಳಹರಿವಿದ್ದು, 2069 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News