×
Ad

ಮಳೆಹಾನಿ ಪರಿಹಾರ ಶೀಘ್ರ ಬಿಡುಗಡೆಗೆ ಸರಕಾರಕ್ಕೆ ಮನವಿ: ಶಾಸಕ ಎಂ.ಪಿ ಕುಮಾರಸ್ವಾಮಿ

Update: 2018-06-12 23:00 IST

ಮೂಡಿಗೆರೆ, ಜೂ.12: ಮಳೆಯಿಂದ ಹಾನಿಗೊಳಗಾದ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಶೀರ್ಘ ಪರಿಹಾರದ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದೆಂದು ಶಾಸಕ ಎಂ.ಪಿ ಕುಮಾರಸ್ವಾಮಿ ತಿಳಿಸಿದರು. 

ಕಳೆದ ಇಪ್ಪತ್ತು ವರ್ಷಗಳ ನಂತರ ಈ ಬಾರಿ ಮುಂಗಾರು ದಾಖಲೆ ಮಳೆ ಸುರಿಸುತ್ತಿದ್ದು, ಅತಿವೃಷ್ಟಿ ಪೀಡಿತ ಪ್ರದೇಶಗಳಾದ ಹಂತೂರು, ಕಣಚೂರು, ಉಗ್ಗೇಹಳ್ಳಿ ದೇವೃಂದ, ಗೌಡಹಳ್ಳಿ, ಭೈರಾಪುರ, ಬೆಟ್ಟದಮನೆ ಮತ್ತಿತರ ಭಾಗಗಳಲ್ಲಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ಗೇಹಳ್ಳಿ ತಡೇಗೋಡೆ ಸಮೀಪ ಮಳೆನೀರು ಬಂದಿದ್ದು, ಉಗ್ಗೇಹಳ್ಳಿ ಕಾಲೋನಿ ಮರು ವಸತಿ ಕಲ್ಪಿಸಿಕೊಡಲು ಶೀರ್ಘಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಹೇಮಾವತಿ ನದಿ ಪಾತ್ರ ಉಕ್ಕಿ ಹರಿಯುತ್ತಿದ್ದು, ಭತ್ತ, ಕಾಫಿ, ಕಾಳುಮೆಣಸು, ಮತ್ತು ತರಕಾರಿ ಬೆಳೆಗಳು ನಾಶ ಹೊಂದಿವೆ. ಅಲ್ಲದೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ರಸ್ತೆಗಳು ಚರಂಡಿಗಳಾಗಿವೆ. ಸರಕಾರಕ್ಕೆ ಕೂಡಲೇ ಅತಿವೃಷ್ಟಿ ಪರಿಹಾರ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. 

ನಂತರ ಅಂಗಡಿ ದೇವಸ್ಥಾನಕ್ಕೆ ತೆರಳಿ ಮಳೆಹಾನಿ ಪ್ರದೇಶಗಳನ್ನು ಶಾಸಕರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷ ಸುನೀಲ್ ನಿಡುಗೂಡು, ರಘು ಜನ್ನಾಪುರ, ವಿನೋದ್ ಕಣಚೂರು, ಸಂದರ್ಶ್, ಚಂದ್ರು ಉಲ್ಲೇಮನೆ ಮತ್ತಿತರರು ಇದ್ದರು. 

ದಾಖಲೆ ಮಳೆ: ದೇವೃಂದ, ಕಣಚೂರು, ಗೌಡಹಳ್ಳಿ, ಊರುಬಗೆಯಲ್ಲಿ ಕಳೆದ 24 ಗಂಟೆಯಲ್ಲಿ 70 ಸೆಂ.ಮೀ ಮಳೆಯಾಗಿದ್ದು, ಉಳಿದಂತೆ 22 ಇಂಚು ಮಳೆ ದಾಖಲಾಗಿದೆ. ಹೇಮಾವತಿ ಸೇರಿದಂತೆ ಈಚುವಳ್ಳಿ ಹಳ್ಳ, ಉಲಿಗೆ ಹಳ್ಲ, ಸೇರಿದಂತೆ ಸಣ್ಣ ಪುಟ್ಟ ನದಿಗಳು ತುಂಬಿ ಹರಿಯುತ್ತಿದ್ದು, ಗದ್ದೆ ಬಯಲು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಮಳೆಯೊಂದಿಗೆ ಗುಡುಗು ಸಿಡಿಲು ಆರ್ಭಟಿಸಿದ್ದು, ಇದರಿಂದ ನದಿ ಪಾತ್ರದ ಪಕ್ಕದ ಕೃಷಿ ಬೆಳೆಗಳು ಸೇರಿದಂತೆ ಮರಗಿಡಗಳು ಕೊಚ್ಚಿಕೊಂಡು ಸಾಗುತ್ತಿದೆ. ಗುಡ್ಡ ಬೆಟ್ಟಗಳಿಂದ ಹರಿಯುವ ನೀರಿನ ರಬಸಕ್ಕೆ ಅಲ್ಲಲ್ಲಿ ಭೂ ಕುಸಿತ ಉಂಟಾಗಿದ್ದು, ಗೌಡಹಳ್ಳಿ ಸಮೀಪದ ಹೆಮ್ಮದಿ ಗ್ರಾಮದಲ್ಲಿ ನಾರಯಣಗೌಡ ಎಂಬುವವರ ಮನೆಗೋಡೆ ಕುಸಿದ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News