ಸಮಾಜ ಸೇವಕನಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇ ಗೆಲುವಿಗೆ ಕಾರಣ: ಶಾಸಕ ಟಿ.ಡಿ.ರಾಜೇಗೌಡ

Update: 2018-06-12 17:35 GMT

ಕೊಪ್ಪ,ಜೂ.12: ಕೊಪ್ಪ ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಸಂಭ್ರಮ-ಸಂಕಲ್ಪ ಸಮಾವೇಶ ದಲ್ಲಿ ಶೃಂಗೇರಿ ಕ್ಷೇತ್ರದ ನೂತನ ಶಾಸಕ ಟಿ.ಡಿ. ರಾಜೇಗೌಡರನ್ನು ಸನ್ಮಾನಿಸಲಾಯಿತು. 

ಸಂಭ್ರಮ ಸಂಕಲ್ಪ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಶಾಸಕ ಟಿ.ಡಿ. ರಾಜೇಗೌಡ, ಕಳೆದ ಬಾರಿ ಅಲ್ಪ ಅಂತರದ ಸೋಲನುಭವಿಸಿದರೂ ಧೃತಿಗೆಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಕಷ್ಟಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಈ ಬಾರಿ ನನ್ನ ಕೈಹಿಡಿದಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗಾಗಿ ಅವಿರತ ಶ್ರಮವಹಿಸಿದ್ದೀರಿ. ನಿಮ್ಮ ಸಹಾಯವನ್ನು ಎಂದಿಗೂ ಮರೆಯಲಾರೆ. ಈ ಸಂಭ್ರಮ ನಿಮ್ಮದು, ಸಂಕಲ್ಪ ಮಾತ್ರ ನನ್ನದು. ನೀವೆಲ್ಲ ಮತ ಕೇಳಲು ಹೋದಾಗ ನನ್ನ ಗೆಲುವಿಗಾಗಿ ಜನರಿಗೆ ಕೊಟ್ಟ ಮಾತನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದರಿಂದ ತಲೆದೋರಿದ ರಾಜಕೀಯ ಬೆಳವಣಿಗೆಗಳಿಂದಾಗಿ ವಿಜಯೋತ್ಸವ ಕೈಬಿಟ್ಟು ರಾಜಧಾನಿ ಸೇರಿ ಹಲವು ದಿನಗಳ ಕಾಲ ಅಲ್ಲೇ ಇರಬೇಕಾಯಿತು. ಬೆಂಗಳೂರು ತಲುಪುವುದು ಸ್ವಲ್ಪ ವಿಳಂಭವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಬಿಜೆಪಿ ತೆಕ್ಕೆಗೆ ಸೇರಿದ ರಾಜೇಗೌಡ ಎಂಬ ಅಪಪ್ರಚಾರ ನಡೆಸಲಾಯಿತು. ನಿಮ್ಮ ಬೆವರಿನ ಶ್ರಮದಿಂದ ಗಳಿಸಿದ ಈ ಸ್ಥಾನವನ್ನು ಬೇರೆಯವರಿಗೆ ಮಾರಾಟ ಮಾಡಲಾರೆ. ಬಿಜೆಪಿಯವರ ಅಪಪ್ರಚಾರ, ಹಣದ ಆಮಿಷವನ್ನು ಮೀರಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಋಣಿಯಾಗಿದ್ದೇನೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 5ವರ್ಷ ಪೂರ್ತಿ ಆಡಳಿತ ನಡೆಸುತ್ತದೆ. ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಪಕ್ಷಪಾತವಿಲ್ಲದೆ ಜವಾಬ್ದಾರಿ ನಿರ್ವಹಿಸುತ್ತೇನೆ. ಅಧಿಕಾರಿಗಳಿಂದ ವಿಶ್ವಾಸದಲ್ಲಿ ಕೆಲಸ ಮಾಡಿಸುತ್ತೇನೆ. ತಪ್ಪು ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಗೆಲುವಿಗೆ ನಿಷ್ಠೆಯಿಂದ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿವೃದ್ಧಿ ಕಾರ್ಯಗಳಿಗೆ ಸಲಹೆ ನೀಡಲು ಎಲ್ಲರಿಗೂ ಅವಕಾಶವಿದೆ. ಮಾಧ್ಯಮಗಳ ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.

ಶಾಸಕತ್ವದ ಅವಧಿಯಲ್ಲಿ ನನಗೆ ಸಿಗುವ ಎಲ್ಲ ಸರ್ಕಾರಿ ಭತ್ಯೆಗಳನ್ನು ಸ್ವಂತಕ್ಕೆ ಬಳಸದೆ, ಪುತ್ರಿಯ ಹೆಸರಿನಲ್ಲಿ ಸ್ಥಾಪಿಸಿರುವ ಸುಜನಾ ಚಾರಿಟಬಲ್ ಟ್ರಸ್ಟ್ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ, ಕಷ್ಟದಲ್ಲಿದ್ದವರಿಗೆ ನೆರವು ಮುಂತಾದ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತೇನೆ ಎಂದು ಶೃಂಗೇರಿ ಕ್ಷೇತ್ರದ ನೂತನ ಶಾಸಕ ಟಿ.ಡಿ.ರಾಜೇಗೌಡ ಘೋಷಿಸಿದರು. 

ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಚುನಾವಣೆ ವೇಳೆ ಬಿಜೆಪಿಯವರ ಕೋಮು ರಾಜಕಾರಣ, ಕುಟಿಲ ತಂತ್ರಗಳನ್ನು ಎದುರಿಸಿ ಪ್ರೀತಿ ವಿಶ್ವಾಸದ ರಾಜಕಾರಣ ಮಾಡಿದ ರಾಜೇಗೌಡರಿಗೆ ಗೆಲುವಾಗಿದೆ. ಶೀಘ್ರದಲ್ಲೇ ಹಳೆಯ ಕೋರ್ಟ್ ಆವರಣದಲ್ಲಿ ನೂತನ ಶಾಸಕರ ಕಚೇರಿ ಆರಂಭಗೊಳ್ಳಲಿದೆ ಎಂದರು.

ಪಕ್ಷದ ಚುನಾವಣಾ ಉಸ್ತುವಾರಿ ಕಡ್ತೂರು ದಿನೇಶ್, ಮುಖಂಡರಾದ ಬಾಳೆಮನೆ ನಟರಾಜ್, ಅಸಗೋಡು ನಾಗೇಶ್, ಸಚಿನ್ ಮೀಗಾ, ಎಂ.ಆರ್. ಸುರೇಶ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಮಂಜುನಾಥ್, ಮುಖಂಡರಾದ ಕೆ.ಜಿ. ಶೋಭಿಂತ್, ಕೆ.ಪಿ. ಅಂಶುಮಂತ್, ಕುಕ್ಕುಡಿಗೆ ರವೀಂದ್ರ, ಯು.ಎಸ್. ಶಿವಪ್ಪ, ಚನ್ನಗಿರಿ ಗೌಡ, ವಜ್ರಪ್ಪ, ಶಶಿಕುಮಾರ್, ಕೆ.ಪಿ. ಚಂದ್ರೇಗೌಢ, ಎಚ್.ಎಸ್. ಪ್ರವೀಣ್, ಅನ್ನಪೂರ್ಣ ನರೇಶ್, ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್, ಸುಬ್ರಹ್ಮಣ್ಯ ಶೆಟ್ಟಿ, ಡಿ.ಬಿ. ರಾಜೇಂದ್ರ, ಡಿ.ಎಸ್. ಸತೀಶ್, ಬೆಳಾಲೆ ಈಶ್ವರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News