×
Ad

ಸತತ ನಾಲ್ಕು ದಿನಗಳಿಂದ ಸುರಿದ ಮಳೆಗೆ ಬಿಡುವು: ಸಹಜ ಸ್ಥಿತಿಯತ್ತ ಮಲೆನಾಡು

Update: 2018-06-12 23:13 IST

ಚಿಕ್ಕಮಗಳೂರು, ಜೂ.12:  ಕಾಫಿಯನಾಡಿನಲ್ಲಿ ಮಂಗಳವಾರ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ನಿರಂತರವಾಗಿ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಯಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಂಗಳವಾರ ಮಳೆ ಬಿಡುವು ನೀಡಿದ್ದರಿಂದ ಮಲೆನಾಡಿನ ಜನತೆ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ. 

ಮಲೆನಾಡು ಭಾಗದ ತುಂಗಾ, ಭದ್ರಾನದಿ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನೀರಿನ ಪ್ರಮಾಣ ಸ್ವಲ್ಪಮಟ್ಟಿನಲ್ಲಿ ಇಳಿಕೆ ಕಂಡಿದೆ. ನಾಲ್ಕುದಿನಗಳಿಂದ ಸುರಿದ ಬಾರಿ ಮಳೆಯಿಂದಗಿ ಬೃಹತ್ ಗಾತ್ರದ ಮರಗಳು ಧರೆಗುರುಳಿದ ಮಲೆನಾಡಿನ ಕೊಪ್ಪ, ಶೃಂಗೇರಿ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ರಸ್ತೆಗೆ ಉರುಳಿದ ಮರಗಳ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ. ಮರಗಳು ಧರೆಗುರುಳಿದ ಪರಿಣಾಮ ಅಲ್ಲಲ್ಲಿ ವಿದ್ಯುತ್ ಕಂಬಗಳೂ ಧರೆಗುರುಳಿದ್ದು ಕೆಇಬಿ ಸಿಬ್ಬಂದಿ ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆಯಿಂದಾಗಿ ಮಲೆನಾಡಿನ ಕೆಲ ಪಟ್ಟಣ, ಗ್ರಾಮಗಳು ನಾಲ್ಕು ದಿನಗಳಿಂದಲೂ ಕತ್ತಲೆಯ ಕೂಪದಲ್ಲಿ ಮುಳುಗಿದ್ದವು. 

ಸೋಮವಾರ ಎಡಬಿಡದೆ ಸುರಿದ ಮಳೆಯಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ನೀರಿನಲ್ಲಿ ಮುಳುಗಿ ಹೋಗಿದ್ದು, ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಮಟ್ಟ ಕಡಿಮೆಯಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. 
ಸೋಮವಾರದ ಮಳೆಯಿಂದ ಚಿಕ್ಕಮಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್‍ನ ನಾಲ್ಕು ಕಡೆ ಗುಡ್ಡದ ಮಣ್ಣು ಕುಸಿದು ರಸ್ತೆ ಮಣ್ಣು, ಮರ ಬಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡ ಪರಿಣಾಮ ಕಿ.ಮೀ. ಗಟ್ಟಲೇ ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗಿತ್ತು. ಮಧ್ಯರಾತ್ರಿ 12ಗಂಟೆಯಿಂದಲೇ ಪೊಲೀಸರು ರಸ್ತೆ ತೆರವು ಕಾರ್ಯಚರಣೆ ನಡೆಸಿದ್ದು, ಮಂಗಳವಾರ ಎಸ್ಪಿ ಎಣ್ಣಾಮಲೈ ಸ್ಥಳಕ್ಕೆ ಬೇಟಿ ನೀಡಿ, ಮಧ್ಯಾಹ್ನದ ಹೊತ್ತಿಗೆ ಟ್ರಾಫಿಕ್‍ನಲ್ಲಿ ಸಿಕ್ಕಿದ್ದ ವಾಹನಗಳನ್ನು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆಲ್ದೂರು, ಮೂಡಿಗೆರೆ ತಾಲೂಕಿನ ಕಗ್ಗನಹಳ್ಳ ಭಾಗಗಳಲ್ಲಿ ಮನೆಗಳ ಮೇಲೆ ಮರಗಳು ಉರುಳಿದ ಪರಿಣಾಮ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದವು. ಕಗ್ಗನ ಹಳ್ಳ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬಿದ್ದ ಪರಿಣಾಮ ಐದು ವರ್ಷದ ಬಾಲಕಿ ಸೇರಿದಂತೆ ಮನೆಯಲ್ಲಿದ್ದ ಮೂರ್ವರು ಗಾಯಗೊಂಡಿದ್ದರು. ಮಳೆಯ ಹಿನ್ನೆಲೆಯಲ್ಲಿ ಸೋಮವಾರ, ಮಂಗಳವಾರ ಶಾಲಾ ಕಾಲೇಜ್‍ಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. 

ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಸ್ಪಲ್ಪ ಪ್ರಮಾಣ ಮಳೆ ಕಂಡು ಬಂದರೆ ಮಧ್ಯಾಹ್ನದ ಸಮಯದಲ್ಲಿ ಮೋಡ ಕವಿದ ವಾತವರಣ ಮಂದುವರೆದಿತ್ತು. ಭಾನುವಾರ, ಸೋಮವಾರ ಸುರಿದ ಮಳೆಯಿಂದ ಅಡಿಕೆ ಮರ, ಬೃಹತ್ ಆಕಾರದ ಮರಗಳು ಧರೆಗೆ ಉರುಳಿದ್ದವು. ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷಿಕರು ತಮ್ಮ ಜಮೀನುಗಳತ್ತಾ ಮುಖ ಮಾಡಿದ್ದರು. 

ಜಿಲ್ಲಾದ್ಯಂತ ಸುರಿದ ಮಳೆ ವಿವರ:
ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ 177.2 ಮಿ.ಮೀ., ಕೆರೆಕಟ್ಟೆಯಲ್ಲಿ 167, ಮೂಡಿಗೆರೆ ತಾಲೂಕಿನ ಗೋಣಿಬೀಡಿನಲ್ಲಿ 132, ಕೊಟ್ಟಿಗೆಹಾರದಲ್ಲಿ 111, ಜಾವಳಿಯಲ್ಲಿ 120, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ 152, ಬಸರಿಕಟ್ಟೆ 144 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News