×
Ad

ಮಡಿಕೇರಿ: ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

Update: 2018-06-12 23:42 IST

ಮಡಿಕೇರಿ, ಜೂ.12: ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಕಾಡ್ಲೂರು ಸತ್ಯ ನಾರಾಯಾಣಚಾರ್ಯ ಅವರು ಕರೆ ನೀಡಿದ್ದಾರೆ.     

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ನಗರಸಭೆ, ಒಡಿಪಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ’ ದಿನಾಚರಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಬಗ್ಗೆ ‘ಕಾನೂನು ಅರಿವು-ನೆರವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಯಾವುದೇ ರೀತಿಯ ಅನಿಷ್ಟ ಪದ್ಧತಿಗಳನ್ನು ಕಾನೂನು ಅಥವಾ ಶಿಕ್ಷೆ ವಿಧಿಸುವುದರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲಿಯೂ ಶಿಕ್ಷಣ ಮತ್ತು ಜಾಗೃತಿ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಅಭಿಪ್ರಾಯಪಟ್ಟರು.  

ಪ್ರತಿಯೊಬ್ಬರ ಜೀವನ ಮಟ್ಟವನ್ನು ಸುಧಾರಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಸೌಲಭ್ಯಗಳನ್ನು ಪಡೆದು ಬದುಕು ಉತ್ತಮ ಪಡಿಸಿಕೊಳ್ಳುವುದರ ಜೊತೆಗೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವಂತಾಗಬೇಕು ಎಂದು ಅವರು ಹೇಳಿದರು.  

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.  

ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕಿದೆ. ಆದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಕವನ್  ಮಾತನಾಡಿ, ಶಿಕ್ಷಣದಿಂದ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ದುಡಿಮೆಗೆ ದೂಡದೇ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಮಕ್ಕಳ ವಿದ್ಯಾರ್ಜನೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.  

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ ಮಕ್ಕಳ ಸಹಾಯವಾಣಿ 1098 ಬಳಸಿಕೊಂಡು ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು. ವಕೀಲರಾದ ಕೆ.ಎಂ.ಕುಂಞ ಅಬ್ದುಲ್ಲಾ ಮಾತನಾಡಿ, ಬಾಲ ಕಾರ್ಮಿಕರು ವಿದ್ಯಾವಂತರ ಮನೆಗಳಲ್ಲಿಯೇ ಹೆಚ್ಚು ಕಂಡು ಬರುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಬಡತನ, ಶೋಷಣೆ, ಅನಕ್ಷರತೆಯೇ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರಲು ಕಾರಣ. ಆದ್ದರಿಂದ ಪೋಷಕರು ಮಕ್ಕಳ ಭವಿಷ್ಯ ರೂಪಿಸುವತ್ತ ಗಮನ ನೀಡಬೇಕು ಎಂದು ಅವರು ಸಲಹೆ ಮಾಡಿದರು. ಮಕ್ಕಳ ರಕ್ಷಣೆ ಮತ್ತು ಪೋಷಣೆ ಮೇಲೆ ದೇಶದ ಅಭಿವೃದ್ಧಿ ಪರಿಗಣಿಸಲಾಗುತ್ತದೆ. ಆದ್ದರಿಂದ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮೃದ್ಧ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಸಲಹೆ ಮಾಡಿದರು. 

ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಮಹತ್ವ ಕುರಿತು ಪ್ರತಿಜ್ಞಾವಿದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ ಅವರು ಬೋಧಿಸಿದರು.  

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುಳಾ, ಓ.ಡಿ.ಪಿ. ಸಂಸ್ಥೆಯ ಜಾಯ್ಸ್ ಮೇನೇಜಸ್, ಕಾರ್ಮಿಕ ಇಲಾಖೆಯ ತಾಲೂಕು ಅಧಿಕಾರಿ ಯತ್ನಟಿ, ಸಿರಾಜ್ ಅಹಮದ್ ಇತರರು ಇದ್ದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎಚ್.ರಾಮಕೃಷ್ಣ ಅವರು ಸ್ವಾಗತಿಸಿದರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಸಂತ ಮೈಕಲ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News