ಚಾರ್ಮಾಡಿ ಘಾಟ್ ರಸ್ತೆ ಬಂದ್: ಕೊಡಗಿನ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ

Update: 2018-06-12 18:19 GMT

ಮಡಿಕೇರಿ, ಜೂ.12 : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ 2ನೇ ಹಾಗೂ 3ನೇ ತಿರುವಿನ ರಸ್ತೆಯಲ್ಲಿ ಗುಡ್ಡದ ಮಣ್ಣು ಕುಸಿದಿರುವುದರಿಂದ ಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರ ಪರಿಣಾಮವಾಗಿ ನೂರಾರು ವಾಹನಗಳು ಕೊಡಗು ಜಿಲ್ಲೆಯ ರಸ್ತೆಗಳ ಮೂಲಕ ಸಂಚರಿಸಲು ಆರಂಭಿಸಿದ್ದು, ಆತಂಕ ಎದುರಾಗಿದೆ.

ಮಂಗಳೂರು ರಸ್ತೆಯ ಮೂಲಕ ಕೊಡಗಿನ ಸಂಪಾಜೆಯನ್ನು ಪ್ರವೇಶಿಸುತ್ತಿರುವ ಸಾಲು ಸಾಲು ವಾಹನಗಳು ಮಡಿಕೇರಿ ಮಾರ್ಗವಾಗಿ ಮೈಸೂರು, ಬೆಂಗಳೂರು, ಹಾಸನದೆಡೆಗೆ ಸಂಚರಿಸುತ್ತಿವೆ. ಬೆಟ್ಟಗುಡ್ಡಗಳ ಪ್ರದೇಶವಾಗಿರುವ ಸಂಪಾಜೆ-ಮಡಿಕೇರಿ ರಸ್ತೆ ಕಡಿದಾಗಿದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಕಂಟೈನರ್ ಸೇರಿದಂತೆ ಭಾರೀ ಭಾರದ ಬೃಹತ್ ವಾಹನಗಳು ಸಾಲು ಸಾಲಾಗಿ ಬರುತ್ತಿದ್ದು, ಮಡಿಕೇರಿಯಲ್ಲೂ ಸತತವಾಗಿ ಮಳೆಯಾಗುತ್ತಿರುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹದಗೆಡುವ ಸಾಧ್ಯತೆಗಳಿದೆ. ಮಳೆಯೊಂದಿಗೆ ಮಂಜು ಕವಿದ ವಾತಾವರಣವೂ ಇರುವುದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ. ಇದರ ನಡುವೆಯೇ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಭಾರೀ ವಾಹನಗಳ ಸಂಚಾರವಾಗುತ್ತಿದ್ದು, ಅಪಘಾತದ ಭಯ ಮೂಡಿದೆ. ಈ ಬಗ್ಗೆ ಕೊಡಗು ಜಿಲ್ಲಾ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡರೆ ಸೂಕ್ತವೆಂದು ಚಾಲಕರು ಅಭಿಪ್ರಾಯಪಟ್ಟಿದ್ದಾರೆ.

ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿದಿರುವುದರಿಂದ ದಕ್ಷಿಣ ಕನ್ನಡ ಪೊಲೀಸರು ವಾಹನಗಳಿಗೆ ಬದಲಿ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ರಸ್ತೆಯ ಒಂದು ಭಾಗದಲ್ಲಿ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಿದ್ದು ರಸ್ತೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News