ಮಂಡ್ಯ: ನಾಲ್ವರು ದರೋಡೆಕೋರರ ಬಂಧನ
Update: 2018-06-12 23:54 IST
ಮಂಡ್ಯ, ಜೂ.12: ಮದ್ದೂರು ಪಟ್ಟಣದ ಮನೆಯೊಂದರಲ್ಲಿ ಕೊಲೆ ಬೆದರಿಕೆ ಹಾಕಿ ನಗನಾಣ್ಯ, ಚಿನ್ನಾಭರಣ ದರೋಡೆ ಮಾಡಿದ್ದ ನಾಲ್ಕು ಮಂದಿಯನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಾಘವ ನಗರದ ಸುರೇಶ್, ಬ್ಯಾಟರಾಯನಪುರದ ಸುನೀಲ್, ಶ್ರೀನಗರದ ದರ್ಶನ್ ಹಾಗೂ ಕಿರಣ್‍ಕುಮಾರ್ ಬಂಧಿತ ದರೋಡೆಕೋರರು.
ಬಂಧಿತರಿಂದ ಆಯುಧ ಹಾಗೂ 102.93 ಗ್ರಾಂ. ತೂಕದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಎಪ್ರಿಲ್ 27ರಂದು ಸಂಜೆ ಮದ್ದೂರು ಪಟ್ಟಣದ ಸವಿತಾ ಎಂಬುವರ ಮನೆಗೆ ಬಂಧಿತ ಅರೋಪಿಗಳು ಮಾರಕಾಸ್ತ್ರಗಳೊಂದಿಗೆ ನುಗ್ಗಿ ಬೆದರಿಕೆ ಹಾಕಿ 92 ಸಾವಿರ ರೂ, ಚಿನ್ನಾಭರಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.