×
Ad

ಚಿಕ್ಕಮಗಳೂರು: ನರೇಗಾ ಯೋಜನೆಯಡಿಯಲ್ಲಿ 4 ಕೋ. 27 ಲಕ್ಷ ರೂ. ಅವ್ಯವಹಾರ; ಆರೋಪ

Update: 2018-06-13 17:31 IST

ಚಿಕ್ಕಮಗಳೂರು, ಜೂ.13: ತೆರವಾಗಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಸಿಇಒ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ವಿಳಂಬ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಯಾರೋ ಮಾಡಿದ ಅವ್ಯವಹಾರ ಸಂಬಂಧ ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೊರಗುತ್ತಿಗೆ ನೌಕರರು, ಇಂಜಿನಿಯರ್‍ಗಳಿಗೆ ಕಳೆದ 8 ತಿಂಗಳಿನಿಂದ ವೇತನ ತಡೆ ಹಿಡಿದಿದ್ದಾರೆ. ಕೆಲಸದ ನೆಪದಲ್ಲಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಜಿಪಂ ಸಾಮಾನ್ಯ ಸಭೆಯಯಲ್ಲಿ ಕೈಗೊಂಡ ನಿರ್ಣಯಗಳ ಜಾರಿಗೆ ಸಿಇಒ ಮುಂದಾಗದೇ ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದಾರೆಂದು ಜಿಪಂ ಸದಸ್ಯರು ಆರೋಪಿಸಿದ್ದಾರೆ.

ಜಿಲ್ಲೆಯ ವಿವಿಧ ಜಿಪಂ ಕ್ಷೇತ್ರಗಳ ಜಿಪಂ ಸದಸ್ಯರಾದ ಸೋಮಶೇಖರ್, ಮಹೇಶ್ ಒಡೆಯರ್, ಜಸಂತಾ ಅನಿಲ್, ರೇಣುಕಾ ನಟರಾಜ್, ರಾಧಾ ಶಿವಣ್ಣ, ಲೋಲಾಕ್ಷಿ ಬಾಯಿ, ಸುಜಾತಾ ಕೃಷ್ಣಮೂರ್ತಿ ಹಾಗೂ ಅಮಿತಾ ಗುರುವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ಸತ್ಯಭಾಮ ಅವರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ  ಸರ್ವಾಧಿಕಾರದ ಧೋರಣೆ ಅನುಸರಿಸುತ್ತಿದ್ದಾರೆ. ಸಿಇಒ ಅವರ ಈ ರೀತಿಯ ಕಾರ್ಯ ವೈಖರಿ ವಿರುದ್ಧ ಸರಕಾರಕ್ಕೆ ದೂರು ನೀಡಿ ವರ್ಗಾವಣೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಜಿಪಂ ಸದಸ್ಯ ಸೋಮಶೇಖರ್, ಚುನಾವಣಾ ನೀತಿ ಸಂಹಿತೆ ಇದ್ದಾಗಲೂ ಜಿಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಸಲು ಅವಕಾಶವಿದೆ. ಆದರೆ ಸಿಇಒ ಸತ್ಯಭಾಮ ಅವರ ಚುನಾವಣಾ ಕೆಲಸದ ಒತ್ತಡ ನೆಪ ಮಾಡಿಕೊಂಡು ಚುನಾವಣೆಯನ್ನು ಮುಂದೂಡಿದ್ದರು. ಜಿಪಂ ಸದಸ್ಯರ ಒತ್ತಾಯದಿಂದಾಗಿ ಜೂ.20 ರಂದು ಚುನಾವಣೆ ನಡೆಸುವುದಾಗಿ ಹೇಳಿದ್ದಾರೆಂದ ಅವರು, ಜಿಪಂ ನರೇಗಾ ಕಾಮಗಾರಿಗಳ ಅನುದಾನ ಬಿಡುಗಡೆ ಸಂಬಂಧ ಸಾಮಾಜಿಕ ಲೆಕ್ಕಪರಿಶೋಧನೆಯಲ್ಲಿ 4 ಕೋಟಿ. 27 ಲಕ್ಷ ರೂ. ಹೆಚ್ಚುವರಿ ಹಣ ಬಿಡುಗಡೆಯಾಗಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಎಸಗಿದವರ ವಿರುದ್ಧ ಕ್ರಮಕೈಗೊಳ್ಳವ ಬದಲು ಸಿಇಒ ಸತ್ಯಭಾಮ ಅವರು ಜಿಲ್ಲಾ ಪಂಚಾಯತ್‍ನಲ್ಲಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ 42 ಇಂಜಿನಿಯರ್‍ಗಳಿಗೆ ನೋಟಿಸ್ ನೀಡಿದ್ದು, ಡಿಸೆಂಬರ್ ತಿಂಗಳಿನಿಂದ ಎಲ್ಲ ನೌಕರರ ವೇತನ ತಡೆಹಿಡಿದಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡಿರುವುದರಿಂದ ನೌಕರರು ಒತ್ತಡಲ್ಲಿ ಕೆಲಸ ಮಾಡುವಂತಾಗಿದೆ. ನೌಕರರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಜಿಪಂ ನೌಕರರರು, ಗ್ರಾಪಂ ಸಿಬ್ಬಂದಿಯ ಸಣ್ಣಪುಟ್ಟ ತಪ್ಪಿಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಬಗ್ಗೆ ನೌಕರರು ಜಿಪಂ ಸದಸ್ಯರಿಗೆ ದೂರು ನೀಡಿದ್ದಾರೆ. ಸಿಇಒ ಸತ್ಯಭಾಮ ತಮ್ಮ ಕಾರ್ಯವೈಖರಿಯನ್ನು ಸರಿಪಡಿಕೊಳ್ಳಬೇಕು. ತಪ್ಪಿದಲ್ಲಿ ಅವರ ವರ್ಗಾವಣೆಗೆ ಸರಕಾರಕ್ಕೆ ಮನವಿ ಮಾಡಲಾಗುವುದೆಂದರು

ಕಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯ ಮಹೇಶ್ ಒಡೆಯರ್ ಮಾತನಾಡಿ, ಕಳೆದ ಮಾರ್ಚ್‍ನಲ್ಲಿ ಜಿಪಂ ಸಾಮಾನ್ಯಸಭೆ ನಡೆದಿದ್ದು, ಸಭೆಯಲ್ಲಿ ಜಿಪಂ ಸದಸ್ಯ ಶರತ್‍ ಕೃಷ್ಣಮೂರ್ತಿ ನರೆಗಾ ಜಾಬ್‍ಕಾರ್ಡ್‍ಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ಅವ್ಯವಹಾರವನ್ನು ನರೇಗಾ ಯೋಜನೆಗೆ ಸಂಬಂಧಿಸಿದ ಅಧಿಕಾರಿ ಮಂಜುನಾಥ್ ಎಂಬವರು ದೃಢಪಡಿಸಿದ್ದರು. ಅವ್ಯವಹಾರದಲ್ಲಿ ಸಿಇಒ ಸತ್ಯಭಾಮ ಅವರೇ ಭಾಗಿಯಾಗಿದ್ದಾರೆಂಬ ಆರೋಪವೂ ಕೇಳಿ ಬಂದಿದ್ದರಿಂದ ಸಿಇಒ ಸೇರಿದಂತೆ ಇಬ್ಬರು ಜಪಂ ಸದಸ್ಯರನ್ನೊಳಗೊಂಡ ತನಿಖಾ ಸಮಿತಿ ನೇಮಕಕ್ಕೆ ಒತ್ತಾಯಿಸಲಾಗಿತ್ತು. ಆದರೆ ಸಿಇಒ ಅವರು 4 ತಿಂಗಳಾದರೂ ಈ ಸಮಿತಿಯನ್ನು ರಚಿಸಿಲ್ಲ. ಬದಲಾಗಿ ಜಾಬ್ ಕಾರ್ಡ್ ಅವ್ಯವಹಾರದ ತನಖೆಯನ್ನು ಓಂಬುಡ್ಸ್‍ಮನ್ ಮೂಲಕ ಮಾಡಿಸಲು ಮುಂದಾಗಿದ್ದಾರೆ. ಇದು ಕಾನೂನು ಬದ್ಧವಲ್ಲ ಎಂದ ಅವರು, ಸಿಇಒ ಸತ್ಯಭಾಮ ಅವರು ಸರ್ವಾಧಿಕಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವ ಸದಸ್ಯರನ್ನೂ ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಯಾರ ಮಾತನ್ನೂ ಕೇಳುತ್ತಿಲ್ಲ. ಆದ್ದರಿಂದ ಕೂಡಲೇ ಸರಕಾರ ಇಒಒ ಅವರನ್ನು ವರ್ಗಾವಣೆ ಮಾಡಬೇಕು. ಈ ಸಂಬಂಧ ಜೂ.20ರ ನಂತರ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿ ಗ್ರಾಮದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಕೈಗೊಂಡ ಕಾಂಕ್ರೀಟ್ ರಸ್ತೆಯನ್ನು ಗ್ರಾಪಂ ಪಿಡಿಒ ಒಬ್ಬರು ಟ್ರ್ಯಾಕ್ಟರ್ ಮೂಲಕ ಹಾಳು ಗೆಡವಿದ್ದಾರೆ. ಈ ಬಗ್ಗೆ ಸಿಇಒ ಅವರಿಗೆ ದೂರು ನೀಡಿದ್ದು, ಇದುವರೆಗೂ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದ ಸೋಮಶೇಖರ್, ಪಿಡಿಒ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದಾಗಲೂ ಸಿಇಒ ಅವರು ದೂರು ನೀಡುವುದನ್ನು ತಡೆದಿದ್ದಾರೆ. ಪಿಡಿಒ ಅವರ ವಿರುದ್ದ ಕ್ರಮವಹಿಸಲು ಸಿಇಒ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದ್ದಾರೆ.
- ಸೋಮಶೇಖರ್ ಜಿಪಂ ಸದಸ್ಯ

ನರೇಗಾ ಯೋಜನೆಯಡಿ ನಡೆದಿರುವ 4 ಕೋ 27 ಲಕ್ಷ ರೂ. ಅವ್ಯವಹಾರದಡಿ ಸಮಗ್ರ ತನಿಖೆಯಾಗಬೇಕು. ಹಣ ವಸೂಲಿ ನೆಪದಲ್ಲಿ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಇಂಜಿಯರ್‍ಗಳು ಹಾಗೂ ಸಿಬ್ಬಂದಿಗೆ ವೇತನ ತಡೆಹಿಡಿದರುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಅಮಾಯಕರಿಗೆ ಶಿಕ್ಷೆಯಾಗಬಾರದು. ನರೇಗಾ ಸಮಾಜಿಕ ಲೆಕ್ಕ ಪರಿಶೋಧನೆ ಪ್ರತೀ ವರ್ಷ ನಡೆಯಬೇಕು. ಆದರೆ ಒಮ್ಮೆ ಮಾತ್ರ ಮಾಡಲಾಗಿದೆ. ಜಾಬ್‍ಕಾರ್ಡ್ ಅವ್ಯವಹಾರದಲ್ಲಿ ಸಿಇಒ ಅವರ ಮೇಲೆ ಆರೋಪ ಇರುವುದರಿಂದ ಅವರೇ ನೇಮಿಸಿ ಓಂಬುಡ್ಸ್‍ಮನ್ ಮೂಲಕ ತನಿಖೆ ನಡೆಸುವುದು ಸರಿಯಲ್ಲ.
- ಮಹೇಶ್ ಒಡೆಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News