×
Ad

ಮಲೆನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ

Update: 2018-06-13 17:40 IST

ಚಿಕ್ಕಮಗಳೂರು, ಜೂ.13: ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆ ಮಂಗಳವಾರ ಬೆಳಗ್ಗೆಯಿಂದ ಸಂಜೆಯರೆಗೂ ಬಿಡುವು ನೀಡಿತ್ತು. ಆದರೆ ಈ ಭಾಗಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಮತ್ತೆ ವರುಣಾವತಾರ ಜೋರಾಗಿದೆ.

ಮಂಗಳವಾರ ರಾತ್ರಿಯಿಂದ ಸುರಿದ ಮಳೆ ಬುಧವಾರ ಮಧ್ಯಾಹ್ನದವರೆಗೂ ಧಾರಕಾರವಾಗಿ ಸುರಿದಿದೆ. ಮಳೆಯಿಂದಾಗಿ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ, ನೇರ್ಲೆ ಕೊಪ್ಪ ರಸ್ತೆಯ ಸೇತುವೆ ಮೇಲೆ ನೀರು ಹರಿದು ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನದ ನಂತರ ಮಳೆ ಕಡಿಮೆಯಾದ ಮೇಲೆ ಸಂಚಾರ ಪುನರಾರಂಭಗೊಂಡಿತು.

ಕೊಪ್ಪ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಬಾರೀ ಗಾತ್ರದ ಮರವೊಂದು ರಸ್ತೆಯ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಅಲ್ಲಿಯೂ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರು ಮರವನ್ನು ತೆರವುಗೊಳಿಸಿದ ನಂತರ ಸಂಚಾರ ಪುನಃ ಆರಂಭಗೊಂಡಿತು. ಕೊಪ್ಪ ತಾಲೂಕಿನ ಬಂಡಿಗೆಡೆ ಗ್ರಾಮದ ಮಹಬಲೇಶ್ವರ ಅವರ ಮನೆಯ ಪಕ್ಕದಲ್ಲಿ ಧರೆ ಕುಸಿದಿದ್ದು, ಸ್ವಲ್ಪದರಲ್ಲಿ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.

ಮೂಡಿಗೆರೆಯಲ್ಲಿ ಮಳೆಯ ಅಬ್ಬರ ಇನ್ನೂ ಹೆಚ್ಚಾಗಿತ್ತು. ಹೇಮಾವತಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಣಕಲ್ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಅಕ್ಕ ಪಕ್ಕದ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಉದುಸೆ ಗ್ರಾಮದಲ್ಲಿ ಹೇಮಾವತಿ ನದಿ ನೀರು ಅಕ್ಕ ಪಕ್ಕದ ಜಮೀನುಗಳಿಗೆ ನುಗ್ಗಿದೆ. ಲಕ್ಷಾಂತರ ರೂ. ಮೌಲ್ಯದ ಭತ್ತ, ಅಡಕೆ, ಶುಂಠಿ ಹಾಗೂ ಕಾಫಿ ಬೆಳೆ ನದಿ ನೀರಿನಿಂದಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ಮಧ್ಯಾಹ್ನದವರೆಗೂ ಮಳೆಯಾದ ನಂತರ ಮಲೆನಾಡು ವ್ಯಾಪ್ತಿಯ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ ಮೋಡ ಕವಿದ ವಾತಾವರಣ ಇದೆ. ರಾತ್ರಿ ಪುನಃ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಉಳಿದಂತೆ ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಲ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ ಉತ್ತಮ ಮಳೆ ಸುರಿದಿದೆ. ಆ ನಂತರ ಮೋಡ ಮುಸುಕಿದ ವಾತಾವರಣವಿದ್ದು, ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲೂ ಮೋಡ ಕವಿದ ವಾತಾವರಣವಿತ್ತು. ಬುಧವಾರ ಈ ತಾಲೂಕು ವ್ಯಾಪ್ತಿಯ ಕೆಲವೆಡೆ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳಲ್ಲಿ 5 ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ. ಅಂದಾಜು 1 ಲಕ್ಷ ರೂ.ನಷ್ಟು ನಷ್ಠವಾಗಿದೆ ಎಂದು ತಿಳಿದು ಬಂದಿದೆ. ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಡಿದಾಳು ಗ್ರಾಮದ ಚಂದ್ರು ಎಂಬವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಹಾನಿಯಾಗಿ 80 ಸಾವಿರ ರೂ. ಹಾಗೂ ಕೃಷಿ ಹೊಂಡದಲ್ಲಿನ ಮೋಟಾರ್ ಮುಳುಗಡೆಯಾಗಿ 2 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಚಾರ್ಮಡಿ ಘಾಟ್‍ನಲ್ಲಿ ಮುಂದುವರಿದ ಮಣ್ಣು ತೆಗೆಯುವ ಕಾಮಗಾರಿ
ಚಾರ್ಮಾಡಿಘಾಟಿಯಲ್ಲಿ ಬುಧವಾರವೂ ಇಡೀ ದಿನ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು. ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಚಾರ್ಮಡಿ ಘಾಟ್ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಕಾಮಗಾರಿಗೆ ಅಡಚಣೆಯಾಗಿದ್ದು, ಅಲ್ಲಲ್ಲಿ ಪದೇ ಪದೇ ಮಣ್ಣು ಕುಸಿತವಾಗುತ್ತಿದೆ ಎಂದು ತಿಳಿದು ಬಂದಿದೆ.

ಶಾಲಾ ಕಾಲೇಜುಗಳಿಗೆ ಮತ್ತೆ ರಜೆ: 
ಬಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನರಸಿಂಹರಾಜಪುರ ತಾಲೂಕಿನಲ್ಲಿ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬುಧವಾರ ಮತ್ತು ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಳೆ ವಿವರ:
ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ 215, ಹರಿಹರಪುರದಲ್ಲಿ 172, ಕೊಪ್ಪದಲ್ಲಿ 158, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ 176, ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ 164.3, ಶೃಂಗೇರಿಯಲ್ಲಿ 148 ಮಿ.ಮೀ. ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ (ವಿವರ : ಮಿ.ಮೀ.ಗಳಲ್ಲಿ)
ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 10.2, ವಸ್ತಾರೆ 7.2, ಜೋಳದಾಳು 13.6, ಆಲ್ದೂರು 12, ಕೆ.ಆರ್.ಪೇಟೆ 6.1, ಅತ್ತಿಗುಂಡಿ 29.2, ಸಂಗಮೇಶ್ವರಪೇಟೆ 16.5, ಬ್ಯಾರವಳ್ಳಿ 15.2, ಕಳಸಾಪುರ 2, ಮಳಲೂರು 6.1, ದಾಸರಹಳ್ಳಿಯಲ್ಲಿ 20.2ಮಿ.ಮೀ. ಮಳೆಯಾಗಿದೆ.

ಕಡೂರು ತಾಲೂಕಿನ ಕಡೂರು 3, ಯಗಟಿ 1.4, ಸಖರಾಯಪಟ್ಟಣ 7, ಬೀರೂರು 5.2, ಎಮ್ಮೆದೊಡ್ಡಿ 10.2, ಕೊಪ್ಪ ತಾಲ್ಲೂಕಿನ ಕೊಪ್ಪ 158, ಹರಿಹರಪುರ 172, ಜಯಪುರ 60, ಕಮ್ಮರಡಿ 215, ಬಸರಿಕಟ್ಟೆಯಲ್ಲಿ 69.2ಮಿ.ಮೀ. ಮಳೆಯಾಗಿದೆ.

ಮೂಡಿಗೆರೆ ತಾಲೂಕಿನ ಮೂಡಿಗೆರೆ 96.5, ಕೊಟ್ಟಿಗೆಹಾರ 176, ಜಾವಳಿ 38, ಗೋಣಿಬೀಡು 110, ಕಳಸ 76.6, ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ 83.6, ಬಾಳೆಹೊನ್ನೂರು 57.2, ಮೇಗರಮಕ್ಕಿಯಲ್ಲಿ 110ಮಿ.ಮೀ. ಮಳೆಯಾಗಿದೆ.

ಶೃಂಗೇರಿ ತಾಲೂಕಿನ ಶೃಂಗೇರಿ 148, ಕಿಗ್ಗ 164.3, ಕೆರೆಕಟ್ಟೆ 92.6, ತರೀಕೆರೆ ತಾಲೂಕಿನ ತರೀಕೆರೆ 9.8, ಲಕ್ಕವಳ್ಳಿ 11.2, ಅಜ್ಜಂಪುರ 7.4, ಬುಕ್ಕಾಂಬುದಿ 1, ಲಿಂಗದಹಳ್ಳಿ 8.2, ತಣಿಗೆಬೈಲು 14.2, ಉಡೇವಾ 14, ತ್ಯಾಗದಬಾಗಿ 8.2, ಹುಣಸಘಟ್ಟ 3.4, ರಂಗೇನಹಳ್ಳಿಯಲ್ಲಿ 10.8ಮಿ.ಮೀ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News