×
Ad

ಎಮ್ಮೆಲ್ಸಿ ಚುನಾವಣೆಯಲ್ಲಿ ಭೋಜೇಗೌಡ ಜಯಭೇರಿ: ಚಿಕ್ಕಮಗಳೂರಿನಲ್ಲಿ ಜೆಡಿಎಸ್ ವಿಜಯೋತ್ಸವ

Update: 2018-06-13 17:50 IST

ಚಿಕ್ಕಮಗಳೂರು, ಜೂ.13: ವಿಧಾನ ಪರಿಷತ್ ಚುನಾವಣೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಎಸ್.ಎಲ್.ಭೋಜೇಗೌಡ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. 

ಈ ವೇಳೆ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಬೋಜೇಗೌಡ ಭಾರೀ ಅಂತರದಲ್ಲಿ ಗೆಲುವು ಸಾಧಿಸುವುದರೊಂದಿಗೆ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಜಿಲ್ಲೆಯಿಂದ ಎಸ್.ಎಲ್. ಧರ್ಮೇಗೌಡ, ಎಸ್.ಎಲ್. ಬೋಜೇಗೌಡ ರವರು ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದು, ಒಬ್ಬರಿಗೆ ರಾಜ್ಯ ಸರಕಾರ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್ ಮಾತನಾಡಿ, ಭೋಜೇಗೌಡರ ಸತತ ಪರಿಶ್ರಮ ಅವರ ಗೆಲುವಿಗೆ ಸಹಕಾರಿಯಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ದಿ ಮತ್ತು ಪಕ್ಷ ಸಂಘಟನೆಗೆ ಹೆಚ್ಚು ಒಳಿತಾಗಲಿದೆ. ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೆಲುವಿನಿಂದ ಇತ್ತೀಚಿನ ಚುನಾವಣೆಗಳಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿಗೆ ಬಾರಿ ಮುಖಭಂಗವಾಗಿದೆ. ಜೆಡಿಎಸ್ ಕಾರ್ಯಕರ್ತರಲ್ಲಿ ಎಸ್.ಎಲ್.ಭೋಜೇಗೌಡ ಮತ್ತು ಎಸ್.ಎಲ್.ಧಮೇಗೌಡರು ವಿಧಾನ ಸೌಧದಲ್ಲಿ ಜಿಲ್ಲೆಯ ಅಭಿವೃದ್ದಿಯ ಹಾಗೂ ಶಿಕ್ಷಕರ ಧ್ವನಿಯಾಗಿ ಯಶಸ್ವಿಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಜೆಡಿಎಸ್ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ, ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸಿಕ್ಕ ಗೆಲವು ಜಿಲ್ಲೆಯ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಪ್ರಜ್ಞಾವಂತ ಮತದಾರರ ಕ್ಷೇತ್ರವಾದ ಶಿಕ್ಷಕರ ಕ್ಷೇತ್ರದಲ್ಲಿ ಪ್ರಜ್ಞೆಯಿಂದ ಮತಚಲಾಯಿಸುವ ಮೂಲಕ ಬಡವರಪರ ಕಾಳಜಿ ಹೊಂದಿರುವ ಅಭಿವೃದ್ದಿ ಹರಿಕಾರರಿಗೆ ಬೆಂಬಲಿಸಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಣ, ಹೆಂಡದ ಮೂಲಕ ಮತದಾರರನ್ನು ಕೊಂಡು ಗೆದ್ದು ಬೀಗಿದ್ದ ಬಿಜೆಪಿಗೆ ಪ್ರಜ್ಞಾವಂತ ಮತದಾರರ ಕ್ಷೇತ್ರದ ಶಿಕ್ಷಕರು ತಕ್ಕಪಾಠ ಕಲಿಸಿದ್ದಾರೆ ಎಂದರು. 

ಜೆಡಿಎಸ್ ವಕ್ತಾರ ಶಹಬುದ್ದೀನ್ ಮಾತನಾಡಿ, ಇಷ್ಟು ವರ್ಷಗಳು ಜೆಡಿಎಸ್‍ಗೆ ಕೆಟ್ಟ ದಿನಗಳು ಇದ್ದವು. ಈಗ ಜೆಡಿಎಸ್‍ಗೆ ಒಳ್ಳೆಯ ದಿನ ಬಂದಿದೆ. ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದರೊಂದಿಗೆ ಜೆಡಿಎಸ್‍ಗೆ ಒಳ್ಳೆಯ ಕಾಲ ಆರಂಭವಾಗಿದೆ ಎಂದರು.

ನಗರ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ, ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಮಾನುಮಿರಾಂಡ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಉಪಾಧ್ಯಕ್ಷ ಸೋಮೇಗೌಡ ಕಾರ್ಯದರ್ಶಿ ಆಣೂರು ಲಕ್ಷ್ಮಣ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್, ಉಪಾಧ್ಯಕ್ಷ ಅಯೂಬ್‍ಖಾನ್, ಸಿರಾಜ್, ಮುಸ್ತಾಕ್, ಕೋಟೆ ಚಂದ್ರು, ಸಿದ್ದೇಶ್, ಧರ್ಮರಾಜ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News