×
Ad

ಹಾಸನ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲು ಒತ್ತಾಯಿಸಿ ಧರಣಿ

Update: 2018-06-13 17:53 IST

ಹಾಸನ,ಜೂ.13: ರಾಜ್ಯದಲ್ಲಿ ಉನ್ನತ ಶಿಕ್ಷಣದವರೆಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸಾರ್ವತ್ರಿಕವಾಗಿ ಉಚಿತ ಬಸ್‍ಪಾಸ್ ನೀಡುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳು, ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸನ್ನು ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ತೀವ್ರ ಬರಗಾಲವನ್ನು ಎದುರಿಸಲಾಗುತ್ತಿದೆ. ದುಬಾರಿ ಶುಲ್ಕ ಮತ್ತು ದುಬಾರಿ ಬಸ್ ಶುಲ್ಕ ಕಟ್ಟಿ ಶಿಕ್ಷಣ ಪೂರೈಸುವುದು ಕಷ್ಟಕರವಾಗಿದೆ. ಇದರಿಂದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶಿಕ್ಷಣದಿಂದ ವಂಚಿತರಾಗಬೇಕಾಗಿದೆ. ರಾಜ್ಯದಲ್ಲಿ ಬಸ್‍ಪಾಸ್ ಪ್ರಯಾಣ ದರ ಇತರೆ ರಾಜ್ಯಕ್ಕಿಂತ ದುಬಾರಿಯಾಗಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದೆ. ಹಿಂದಿನ ಕಾಂಗ್ರೆಸ್ ಸರಕಾರ ಬಜೆಟ್‍ನಲ್ಲಿ ಉನ್ನತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸಮ್ಮಿಶ್ರ ಸರಕಾರವು ನಮ್ಮ ನಡೆಯನ್ನು ಎಸ್‍ಎಫ್‍ಐ ಜಿಲ್ಲಾ ಸಮಿತಿಯಿಂದ ಖಂಡಿಸಲಾಗುವುದು ಎಂದ ಧರಣಿ ನಿರತರು, ಕೇರಳ, ತಮಿಳುನಾಡು ಮಾದರಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಉಚಿತ ಬಸ್‍ಪಾಸ್ ನೀಡಬೇಕು. ಇಲ್ಲದಿದ್ದರೆ ಜೂನ್ 15 ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್‍ಆರ್‍ಟಿಸಿ ಮುಖ್ಯ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಜಿಲ್ಲಾಧ್ಯಕ್ಷ ಸಿ.ಎಸ್. ಮಹೇಶ್, ಉಪಾಧ್ಯಕ್ಷ ರಕ್ಷಿತಾ, ಕಾರ್ಯದರ್ಶಿ ಎಂ. ಆಶಾ, ತಾಲೂಕು ಅಧ್ಯಕ್ಷ ರಮೇಶ್, ಪ್ರೇಮ, ಗೌತಮಿ, ಪ್ರಸನ್ನ, ನಾಗೇಂದ್ರ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News