ಮುಂದಿನ ಮೂರು ವರ್ಷ ಖಾಸಗಿ ಶಾಲೆಗಳಿಗೆ ಅನುಮತಿ ನೀಡದಿರಲು ಸರಕಾರ ಚಿಂತನೆ

Update: 2018-06-13 12:47 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.13: ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಯಾವುದೇ ಖಾಸಗಿ ಶಾಲೆಗಳನ್ನು ಆರಂಭ ಮಾಡಲು ಅನುಮತಿ ನೀಡದಿರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಅಲ್ಲದೆ, ಪ್ರತಿ ವರ್ಷ ಖಾಸಗಿ ಶಾಲೆಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಸರಕಾರ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

2018-19 ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ನೂತನವಾಗಿ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೋರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿಗೆ ಸುಮಾರು 2,429 ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಅವುಗಳಿಗೆ ಅನುಮತಿ ಸಿಗುವುದು ಕಷ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಿಂದಲೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.25.ರಷ್ಟು ಸೀಟುಗಳನ್ನು ಖಾಸಗಿ ಶಾಲೆಗಳಲ್ಲಿ ನೀಡಲಾಗುತ್ತದೆ. ಸರಕಾರಿ ಶಾಲೆಗಳಿರುವ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುವುದೂ ಮಕ್ಕಳ ದಾಖಲಾತಿ ಸಂಖ್ಯೆಗೆ ಹಿನ್ನಡೆಯಾಗುತ್ತಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಆದುದರಿಂದಾಗಿ, ಮುಂದಿನ ಎರಡು-ಮೂರು ವರ್ಷಗಳವರೆಗೆ ಯಾವುದೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡದಿರಲು ಇಲಾಖೆ ಮುಂದಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎನ್.ಮಹೇಶ್ ಪ್ರತಿಕ್ರಿಯಿಸಿದ್ದು, ಖಾಸಗಿ ಶಾಲೆಗಳ ಸಂಖ್ಯೆಯನ್ನು ತಪಾಸಣೆ ಮಾಡಲು ಇಲಾಖೆ ಮುಂದಾಗಿದೆ. ಹೊಸ ಶಾಲೆಗಳಿಗೆ ಅನುಮತಿ ನೀಡುವ ಮುನ್ನ ಯೋಚನೆ ಮಾಡಬೇಕಾಗಿದೆ. ಸರಕಾರ ಖಾಸಗಿ ಶಾಲೆಗಳಿಗೆ ಸಮಾನವಾಗಿ 176 ಮಾದರಿ ಸರಕಾರಿ ಶಾಲೆಗಳನ್ನು ಸ್ಥಾಪಿಸಿದ್ದೇವೆ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸರಕಾರಿ ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಬದಲು ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಅಗತ್ಯವಿದೆ. ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ನಿಯಮ ತರಬೇಕು. ಇದನ್ನು ಖಾಸಗಿ ಶಾಲೆಗಳು ನಿಯಮಬದ್ಧವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಮುಂದಿನ 5 ವರ್ಷಗಳವರೆಗೆ ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹಿಂದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದರು. ಆದರೆ ಖಾಸಗಿ ಶಾಲೆಗಳ ವ್ಯವಸ್ಥಾಪಕರ ಒತ್ತಡದಿಂದಾಗಿ ತನ್ವೀರ್ ಸೇಠ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈ ವರ್ಷ ಬಂದಿರುವ 2,429 ಅರ್ಜಿಗಳಲ್ಲಿ ಅಧಿಕ ಬೆಂಗಳೂರು ನಗರದಿಂದ ಆಗಿದ್ದು ಬೆಂಗಳೂರು ದಕ್ಷಿಣದಿಂದ 369 ಅರ್ಜಿಗಳು ಮತ್ತು ಬೆಂಗಳೂರು ಉತ್ತರದಿಂದ 216 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News