ಎಂ.ಬಿ.ಪಾಟೀಲ್ ಕಾಂಗ್ರೆಸ್‌ನಿಂದ ಹೊರಬರಲಿ: ಮಾತೆ ಮಹಾದೇವಿ

Update: 2018-06-13 12:56 GMT

ಬೆಂಗಳೂರು, ಜೂ.13: ಸಚಿವ ಸ್ಥಾನದಿಂದ ವಂಚಿತರಾಗಿರುವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಹಾಗೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಹೊರಗಡೆ ಬರಲಿ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಎಂ.ಬಿ.ಪಾಟೀಲ್ ಮುಂಚೂಣಿಯಲ್ಲಿದ್ದರು ಎಂಬ ದುರುದ್ದೇಶದಿಂದಲೇ ಸಚಿವ ಸ್ಥಾನ ನೀಡದೇ ವಂಚಿಸಲಾಗಿದೆ. ಇದು ನಮ್ಮ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ. ಹೀಗಾಗಿ, ಅವರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬರಲಿ ಎಂದು ಹೇಳಿದರು.

ಪ್ರಗತಿಪರ ಚಿಂತಕ, ಮೂಢನಂಬಿಕೆ ವಿರೋಧಿ ಹಾಗೂ ಹಲವಾರು ಪ್ರಗತಿಪರ ಕೆಲಸಗಳಿಗೆ ಆದ್ಯತೆ ನೀಡಿರುವ ಸತೀಶ್ ಜಾರಿಕಿಹೊಳಿಗೂ ಸಚಿವ ಸ್ಥಾನ ನೀಡದಿರುವುದು ಖಂಡನೀಯ. ಹೀಗಾಗಿ, ಸಮಾಜಪರವಾಗಿ ಚಿಂತಿಸುವವರು ಒಂದಾಗಿ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬರಲಿ ಎಂದು ಕರೆ ನೀಡಿದರು.

ವಾಪಸ್ಸು ಕಳಿಸಿಲ್ಲ: ಸಿದ್ದರಾಮಯ್ಯ ಅವರ ಸರಕಾರ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಕಡತವನ್ನು ವಾಪಸ್ಸು ಕಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದೆ. ಆದರೆ, ಕೇಂದ್ರದಿಂದ ಯಾವುದೇ ಕಡತವನ್ನು ವಾಪಸ್ಸು ಕಳಿಸಿಲ್ಲ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಯಾವುದೇ ಪತ್ರವನ್ನು ಕಳಿಸಿಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ತಿಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಮ್.ಜಾಮದಾರ್ ಅಖಲಿ ಭಾರತ ವೀರಶೈವ ಮಹಾಸಭಾವನ್ನು ಲಿಂಗಾಯತ ಮಹಾಸಭೆ ಎಂದು ಬದಲಾಯಿಸಲು ಸೂಚಿಸಿದ್ದಾರೆ. ಒಂದು ವೇಳೆ ಸಾಧ್ಯವಾಗದಿದ್ದರೆ ಲಿಂಗಾಯತ-ವೀರಶೈವ ಮಹಾಸಭೆ ಎಂದು ಬದಲಾಯಿಸಲು ಹೇಳಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.

9 ನೆ ಬಸವೋತ್ಸವ: ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡು ಬಳಿಯಿರುವ ಬಸವ ಗಂಗೋತ್ರಿಯಲ್ಲಿ 9 ನೆ ಬಸವೋತ್ಸವ, ಚನ್ನಬಸವೇಶ್ವರ ಜ್ಞಾನಪೀಠದ ಪೀಠಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅಕ್ಕಾಮಹಾದೇವಿ ಪೀಠದ ಮಾತೆ ಜ್ಞಾನೇಶ್ವರಿ, ಬಸವ ಮಂಟಪದ ಚನ್ನಬಸವರಾಜ ಸ್ವಾಮೀಜಿ, ಚನ್ನಬಸವಾನಂದ ಜ್ಞಾನಪೀಠದ ಚನ್ನಬಸವಾನಂದ ಸ್ವಾಮಿ, ವಕೀಲ ಜೆ.ಜಯರಾಜ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಮಾತೆ ಮಹಾದೇವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News