ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಕೆ: ಸತೀಶ್ ಜಾರಕಿಹೊಳಿ

Update: 2018-06-13 13:17 GMT

ಬೆಳಗಾವಿ, ಜೂ.13: ಪಕ್ಷದ ಕಾರ್ಯಕರ್ತರು ಹಾಗೂ ನನ್ನ ಬೆಂಬಲಿಗರ ಒತ್ತಾಯಕ್ಕೆ ಮಣಿದು, ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯ ಕುರಿತು ಈಗಾಗಲೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಮಾಜಿ ಸಚಿವ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜೀನಾಮೆ ಸಲ್ಲಿಸಿದ ಬಳಿಕ ಕೆಲವರು ನನ್ನನ್ನು ಸಂಪರ್ಕಿಸಿ, ರಾಜೀನಾಮೆ ಹಿಂಪಡೆಯಲು ಮನವೊಲಿಕೆಗೆ ಯತ್ನಿಸಿದರು. ಆದರೆ, ನಾನು ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ನನ್ನ ಸಮಸ್ಯೆ ಒಂದೇ. ಇಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಅವರು ಕಣ್ಣೀರು ಹಾಕುತ್ತಾರೆ, ನಾನು ಕಣ್ಣೀರು ಹಾಕುವುದಿಲ್ಲ ಅಷ್ಟೇ ವ್ಯತ್ಯಾಸ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ತಮಗೆ ಸಚಿವ ಸ್ಥಾನ ಕೈ ತಪ್ಪಲು ಪ್ರಭಾವಿಗಳು ಕಾರಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ನಾನೂ ಅದನ್ನೇ ಹೇಳುತ್ತಿದ್ದೇನೆ. ಪರಿಸ್ಥಿತಿ ಹೀಗಿರುವಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವಿಬ್ಬರೂ ಸೇರಿ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂಬುದನ್ನು ಹುಡುಕಬೇಕಿದೆ ಎಂದರು.

ಸರಕಾರದಲ್ಲಿ ಕಾಂಗ್ರೆಸ್ ಪಾಲಿಗೆ ಇನ್ನೂ ಆರು ಸಚಿವ ಸ್ಥಾನ ಲಭ್ಯವಿದೆ. ಮುಂದಿನ ಹಂತದಲ್ಲಿ ಅದನ್ನು ಭರ್ತಿ ಮಾಡಲಾಗುತ್ತದೆ. ಆದರೆ, ನಾನು ಎರಡನೆ ಹಂತದಲ್ಲಿ ಸಚಿವ ಸ್ಥಾನ ಬೇಡ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ನನ್ನ ಬದಲು ನನ್ನ ಬೆಂಬಲಿಗರಾದ 15 ಶಾಸಕರ ಪೈಕಿ ಯಾರಿಗಾದರೂ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಪಕ್ಷದಲ್ಲಿ ಬಗೆಹರಿಯಲಾರದ ಸಮಸ್ಯೆಗಳೇನಿಲ್ಲ. ಎಲ್ಲವೂ ಬಗೆಹರಿಯಲಿದೆ. ಶಾಸಕರಲ್ಲಿರುವ ಅಸಮಾಧಾನದಿಂದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶುಕ್ರವಾರ ಬೆಂಗಳೂರಿನಲ್ಲಿ ನಡೆಸಲಿರುವ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News