ಇದು ಮೈತ್ರಿ ಸರ್ಕಾರದ ಗೆಲುವು ಅಲ್ಲ, ಕಾಂಗ್ರೆಸ್ ಪಕ್ಷದ ಗೆಲುವು: ಮಾಜಿ ಸಿ.ಎಂ ಸಿದ್ದರಾಮಯ್ಯ

Update: 2018-06-13 14:52 GMT

ಮೈಸೂರು,ಜೂ.13: ಜಯನಗರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಮೈತ್ರಿ ಸರ್ಕಾರದ ಗೆಲುವು ಅಲ್ಲ, ಕಾಂಗ್ರೆಸ್ ಪಕ್ಷದ ಗೆಲುವು ಎಂದು ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಮೈಸೂರು ಜಿಲ್ಲೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕರು ಮತ್ತು ಸೋತ ಅಭ್ಯರ್ಥಿಗಳು, ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 'ಜಯನಗರದಲ್ಲಿ ಗೆಲ್ಲುವ ನಿರೀಕ್ಷೆ ನಮಗೆ ಮೊದಲಿಂದಲೂ ಇತ್ತು. ನಮ್ಮ ಪಕ್ಷಕ್ಕೆ ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಅಭ್ಯರ್ಥಿ ಸೌಮ್ಯಾ ರೆಡ್ಡಿ ತುಂಬಾ ಹುರುಪಿನಿಂದ ಕೆಲಸ ಮಾಡಿದ್ದರು. ಹಾಗಾಗಿ ಗೆದ್ದಿದ್ದಾರೆ. ಅವರಿಗೂ ನನ್ನ ಧನ್ಯವಾದಗಳು ಎಂದರು.

ರಾಜ್ಯದ ರೈತರ ಸಾಲ ಮನ್ನಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಣಕಾಸು ಖಾತೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಇದೆ. ಅವರೇ ಈ ಬಗ್ಗೆ ಚಿಂತನೆ ನಡೆಸಲಿದ್ದಾರೆ. ನಮ್ಮ ಪಕ್ಷ ಯಾವಾಗಲೂ ರಾಜ್ಯದ ರೈತರ ಪರವಾಗಿರುತ್ತದೆ. ಸದ್ಯದ ಪರಿಸ್ಥಿತಿಗೂ ಹಿಂದಿನ ಸರ್ಕಾರದ ಆಡಳಿತಕ್ಕೂ ಸಂಬಂಧವಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿದ್ದ ಎಲ್ಲ ಯೋಜನೆಗಳು ಮುಂದುವರಿಯುತ್ತವೆ ಎಂದರು.

ಖಾಸಗಿ ಹೋಟೆಲ್ ನಲ್ಲಿ ಆತ್ಮಾಲೋಕನ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಲ್ಲಿ ಯಾವ ಆತ್ಮವೂ ಇಲ್ಲ, ಲೋಕವು ಇಲ್ಲ. ಓನ್ಲಿ ಚಿಟ್ ಚಾಟ್. ಇಂದು ಮೈಸೂರು ಜಿಲ್ಲೆಯಲ್ಲಿ ಸೋತ, ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಹಾಯ್ ಬಾಯ್ ಸಭೆ ಆಗಿದೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ನಾವು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದೆ. ಅದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯಗೆ ಉನ್ನತ ಹುದ್ದೆ ಸಿಗಲಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೇನು ಆಕಾಶಕ್ಕೆ ಹೋಗಿ ಕುಳಿತುಕೊಳ್ಳಲು ಆಗುತ್ತಾ ಎಂದು ವ್ಯಂಗ್ಯವಾಡಿದರು. ನಾನು ಎಲ್ಲಾ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಸದ್ಯ ಎಂಎಲ್ ಎ ಆಗಿದ್ದೇನೆ. ಎಂಎಲ್ ಎ ಕೆಲಸ ಮಾಡುತ್ತೇನೆ. ನಾನು ಬದುಕಿರುವವರೆಗೂ ಸಕ್ರೀಯ ರಾಜಕಾರಣಿಯಾಗಿರುತ್ತೇನೆ ಎಂದು ತಿಳಿಸಿದರು.

ಖಾತೆ ಹಂಚಿಕೆ ವಿಚಾರದಲ್ಲಿ ಮಾತನಾಡಿದ ಅವರು, ಎಲ್ಲರೂ ಮಂತ್ರಿಯಾಗಲು ಸಾಧ್ಯವಿಲ್ಲ. ಎಲ್ಲರಿಗೂ ಒಳ್ಳೆಯ ಖಾತೆ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಅತೃಪ್ತಿ, ಅಸಮಾಧಾನ ಸಹಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಎಲ್ಲರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತೆ. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಅತೃಪ್ತಿ, ಅಸಮಾಧಾನ ಸಹಜ. ಅಸಮಧಾನ ಇರಲೇಬಾರದು ಅಂತ ನಾನು ಹೇಳಲ್ಲ. ಯಾರು ಸಚಿವರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ. ಹೀಗಿರುವಾಗ ಎಲ್ಲರೂ ಪಕ್ಷದ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗುತ್ತೆ ಎಂದರು.

ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ವೈಯುಕ್ತಿಕ ವಿಚಾರ. ನಾನು ಪ್ರತಿಕ್ರಿಯಿಸಲ್ಲ. ಅಷ್ಟನ್ನು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News