ವಿಧಾನಸಭೆ ಪ್ರವೇಶಿಸಿದ ‘ಅಪ್ಪ-ಮಗಳು’: ಇದು ರಾಜ್ಯದ ಇತಿಹಾಸದಲ್ಲೇ ಮೊದಲು

Update: 2018-06-13 15:05 GMT

ಬೆಂಗಳೂರು, ಜೂ. 12: ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ‘ಅಪ್ಪ-ಮಗಳು’ ಏಕಕಾಲಕ್ಕೆ ವಿಧಾನಸಭೆ ಪ್ರವೇಶಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

‘ಅಪ್ಪ-ಮಕ್ಕಳು’ ಒಂದೇ ಹಂತದಲ್ಲಿ ವಿಧಾನಸಭೆಗೆ ಆಯ್ಕೆಯಾದ ಹಲವು ನಿದರ್ಶನಗಳಿವೆ. 1994ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪುತ್ರ ಎಚ್.ಡಿ.ರೇವಣ್ಣ ಅವರಿಂದ ಹಿಡಿದು ಈಚೆಗೆ ನಡೆದ 15ನೆ ವಿಧಾನಸಭೆ ಚುನಾವಣೆಯಲ್ಲಿ ಅಪ್ಪ-ಮಕ್ಕಳು ಆಯ್ಕೆಯಾಗಿದ್ದರು.

ಈ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಅಪ್ಪ-ಮಗ ಒಟ್ಟಿಗೆ ಶಾಸನಸಭೆ ಪ್ರವೇಶ ಮಾಡಿದ್ದಾರೆ.
14ನೆ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣದಿಂದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್, ಬೆಂಗಳೂರಿನ ವಿಜಯನಗರದಿಂದ ಎಂ.ಕೃಷ್ಣಪ್ಪ, ಗೋವಿಂದರಾಜು ನಗರ ಕ್ಷೇತ್ರದಿಂದ ಅವರ ಪುತ್ರ ಪ್ರಿಯಾಕೃಷ್ಣ ಆಯ್ಕೆಯಾಗಿದ್ದರು.

ಇದೀಗ ಜಯನಗರ ಕ್ಷೇತ್ರದಿಂದ ಸೌಮ್ಯಾರೆಡ್ಡಿ ವಿಜಯದ ನಗೆ ಬೀರಿದ್ದು, ಅವರ ತಂದೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮ ಆಯ್ಕೆಯಾಗಿದ್ದ ಉದಾಹರಣೆಗಳಿವೆ. ಆದರೆ, ತಂದೆ-ಮಗಳು ಆಯ್ಕೆಯಾಗಿದ್ದು ವಿಧಾನಸಭೆ ಪ್ರವೇಶಿಸುತ್ತಿರುವುದು ಇತಿಹಾಸವೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News