ಮೈಸೂರು ರೇಷ್ಮೆ ಸಿಲ್ಕ್ ಹೆಸರು ಹೇಳಿ ಅಕ್ರಮ ಮಾರಾಟ ಮಾಡಿದರೆ ಕ್ರಮ: ಸಚಿವ ಸಾ.ರಾ.ಮಹೇಶ್ ಎಚ್ಚರಿಕೆ

Update: 2018-06-13 15:14 GMT

ಮೈಸೂರು,ಜೂ.13: ಮೈಸೂರು ರೇಷ್ಮೆ ಸಿಲ್ಕ್ ಹೆಸರು ಹೇಳಿಕೊಂಡು ಅಕ್ರಮವಾಗಿ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋಧ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದ್ದಾರೆ.

ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಗೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶತಮಾನೋತ್ಸವ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಿಲ್ಕ್ ಇಡಿ ದೇಶದಲ್ಲೇ ಉತ್ತಮವಾಗಿದೆ. ಇಂದಿನ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿವೆ. ನಾನೂ ಸಹ ಪ್ರವಾಸೋದ್ಯಮದ ಜೊತೆಗೆ ಈ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಕಾರ್ಮಿಕರ ಶ್ರಮದಿಂದ ಈ ಫ್ಯಾಕ್ಟರಿ ಲಾಭದಲ್ಲಿದೆ. ಇನ್ನೂ 35 ಸಾವಿರ ಸ್ಯಾರಿ ಉತ್ಪಾದನೆಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ವಾರ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತೇನೆ. ಆಸಕ್ತರು ಹಾಗೂ ಹೋಟೆಲ್ ಮಾಲೀಕರನ್ನು ಇದಕ್ಕೆ ಕರೆಯುತ್ತೇನೆ. ಮುಖ್ಯಮಂತ್ರಿಗಳು ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಯುವಕರಿಗೆ ಉದ್ಯೋಗ ನೀಡಲು ಇದೊಂದು ಉತ್ತಮ ಅವಕಾಶ ಎಂದರು.

ಮೈಸೂರು ರೇಷ್ಮೆ ಸಿಲ್ಕ್ ಹೆಸರು ಹೇಳಿಕೊಂಡು ಸಿಲ್ಕ್ ಮಾರಾಟ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಇಂತಹ ವಿಷಯಗಳು ನನ್ನ ಗಮನಕ್ಕೆ ಬಂದಿಲ್ಲ. ಅಕ್ರಮವಾಗಿ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಇಂತಹ ಬೆಳವಣಿಗೆ ಕಂಡು ಬಂದರೆ ತನಿಖಾ ತಂಡ ರಚನೆ ಮಾಡಿ ತನಿಖೆ ಮಾಡಿಸುತ್ತೇನೆ ಎಂದು ಹೇಳಿದರು.

ಮಾಜಿ ಮೇಯರ್‍ಗಳಾದ ರವಿಕುಮಾರ್, ಆರ್.ಲಿಂಗಪ್ಪ, ಮಾಜಿ ಉಪಮೇಯರ್ ಶೈಲೇಂದ್ರ, ಜೆಡಿಎಸ್ ಮುಖಂಡ ಅಬ್ದುಲ್ ಅಝೀಝ್ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News