ಹನೂರು: ರಮಝಾನ್ ಪ್ರಯುಕ್ತ ಉಚಿತ ಪಡಿತರ ವಿತರಣಾ ಕಾರ್ಯಕ್ರಮ
ಹನೂರು,ಜೂ.13: ನಾನು ಮೂರನೇ ಬಾರಿ ಶಾಸಕನಾಗಲು ಮುಸ್ಲಿಂ ಮತಗಳೇ ಕಾರಣ. ಕ್ಷೇತ್ರದ ಮುಸ್ಲಿಮರು ವಾಸಿಸುವ ಎಲ್ಲಾ ಬೂತ್‍ನ ಮತ ಪೆಟ್ಟಿಗೆಯಲ್ಲೂ ಶೇ.99 ರಷ್ಟು ಮತ ಕಾಂಗ್ರೆಸ್‍ಗೆ ಬಂದಿರುವುದು ತಿಳಿದು ಬಂದಿದೆ. ಆದ್ದರಿಂದ ಎಂದೆಂದಿಗೂ ನಾನು ನಿಮಗೆ ಅಭಾರಿಯಾಗಿರುತ್ತೇನೆ ಎಂದು ಶಾಸಕ ಆರ್ ನರೇಂದ್ರ ರಾಜೂಗೌಡ ತಿಳಿಸಿದರು .
ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮುಸ್ಲಿಂ ಬಾಂಧವರಿಗೆ ಉಚಿತ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಈ ಚುನಾವಣೆಯಲ್ಲಿ ಕ್ಷೇತ್ರದ ಮುಸ್ಲಿಮರು ಒಗ್ಗಟ್ಟಾಗಿ ನನ್ನ ಬೆಂಬಲಕ್ಕೆ ನಿಂತು ನನ್ನ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು, ನಾನು ಎಂದಿಗೂ ಸಹ ನಿಮಗೆ ಚಿರರುಣಿಯಾಗಿರುತ್ತೆನೆ ಎಂದರು.
ಇದೇ ಸಂದರ್ಭದಲ್ಲಿ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿ ನಂತರ ಆಹಾರ ಪದಾರ್ಥವುಳ್ಳ ರಂಜಾನ್ ಕಿಟ್ ವಿತರಣೆ ಮಾಡಿ ಮಾತನಾಡಿ, ಪ್ರತಿಯೊಂದು ಧರ್ಮದಲ್ಲೂ ಧಾನ ಧರ್ಮಗಳನ್ನು ಮಾಡುತ್ತಾರೆ. ಆದರೆ ಮುಸ್ಲಿಮರಲ್ಲಿ ಸ್ವಲ್ಪ ವಿಶೇಷವಾಗಿರುತ್ತದೆ. ಉಳ್ಳವರು ಬಡವರಿಗೆ ದಾನ ಧರ್ಮ ಮಾಡಿ ಕಾಪಾಡಿದರೆ ಅವರನ್ನು ದೇವರು ಕಾಪಾಡುತ್ತಾನೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸೈಯದ್ ಮುಜಾಹೀದ್ ಪಾಷ ಅವರು ಕೊಳ್ಳೇಗಾಲ ತಾಲೂಕಿನಲ್ಲಿ ಕಳೆದ 8 ವರ್ಷದಿಂದ ಹಾಗೂ ಹನೂರು ತಾಲೂಕಿನಲ್ಲಿ ಕಳೆದ 2 ವರ್ಷದಿಂದ ಆಹಾರ ಪದಾರ್ಥವುಳ್ಳ ರಂಜಾನ್ ಕಿಟ್ ವಿತರಿಸುತ್ತಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾಂತರ ಘಟಕ ಉಪಾಧ್ಯಕ್ಷ ಸೈಯದ್ ಎಂ.ಡಿ.ಮುಜಾಹೀದ್ ಪಾಷ ನರೇಂದ್ರ ಮೋದಿ ದೇಶದ ಪ್ರಧಾನಿ ಆದ ಮೇಲೆ ಅಲ್ಪಸಂಖ್ಯಾಂತರು, ಹಿಂದುಳಿದವರು, ಪ.ಜಾತಿ ಮತ್ತು ಪಂಗಡದವರ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕುಗ್ಗಿಸುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಆಡಳಿತ ನಡೆಸಲು ಅವಕಾಶ ನೀಡದಂತೆ ದೂರವಿಡಬೇಕು. ಹಾಗೆಯೇ ಸರ್ವರನ್ನು ಸಮಾನತೆಯಿಂದ ಕಾಣುವ ಏಕೈಕ ಪಕ್ಷ ಕಾಂಗ್ರೆಸ್‍ನ್ನು ಬೆಂಬಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡುಗು ಅಲ್ಪಸಂಖ್ಯಾತರ ಅಧ್ಯಕ್ಷ ಯಾಕುಬ್, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ತಾಪಂ ಅಧ್ಯಕ್ಷ ಆರ್.ರಾಜು, ಪಪಂ ಸದಸ್ಯ ಅಕ್ರಂಉಲ್ಲಾ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಹೀಲ್ ಬೇಗ್, ಮುಖಂಡರಾದ ನಜೀರ್ ಪಾಷ, ಅಕ್ರಂ ಪಾಷ, ನಜ್ರುಲ್ಲಾ ಹಾಗೂ ಇನ್ನಿತರರು ಹಾಜರಿದ್ದರು.