ಶಿವಮೊಗ್ಗ: ಸ್ನೇಹಿತರ ಜೊತೆಗೂಡಿ ಗಿಡನೆಟ್ಟು ಹುಟ್ಟುಹಬ್ಬ ಆಚರಿಸಿದ ವಿದ್ಯಾರ್ಥಿ
ಶಿವಮೊಗ್ಗ, ಜೂ. 13: ಸರ್ವೇ ಸಾಮಾನ್ಯವಾಗಿ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ, ಇಲ್ಲವೇ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವ ಮೂಲಕ ಆಚರಿಸಿಕೊಳ್ಳುತ್ತಾರೆ. ಆದರೆ ಶಿವಮೊಗ್ಗ ನಗರದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯೋರ್ವ, ಸ್ನೇಹಿತರ ಜೊತೆಗೂಡಿ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆಯ ವಾಗ್ದಾನದ ಮೂಲಕ, ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ನಗರದ ಪಾರ್ಕ್ ಬಡಾವಣೆಯ ನಿವಾಸಿಗಳಾದ ಖುಷ ಕುಮಾರ್ ಹಾಗೂ ಶ್ರೀಲಕ್ಷ್ಮಿ ದಂಪತಿಯ ಪುತ್ರ ಆರ್.ಕೆ.ವೈಶಾಖ್, ಪರಿಸರ ಕಾಳಜಿ ವ್ಯಕ್ತಪಡಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಈತ ನಂದನ ಶಾಲೆಯಲ್ಲಿ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ.
ಬುಧವಾರ ಆರ್.ಕೆ.ವೈಶಾಕ್‍ನ 15 ಜನ್ಮ ದಿನಾಚರಣೆಯಾಗಿತ್ತು. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಪರಿಸರ ದಿನಾಚರಣೆಯ ಕಾರ್ಯಕ್ರಮಗಳಿಂದ ಪ್ರಭಾವಿತಗೊಂಡ ಆರ್.ಕೆ.ವೈಶಾಖ್, ತನ್ನ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದ.
ಅದರಂತೆ ಆತ ನಗರದ ಹೊರವಲಯ ಸೋಮಿನಕೊಪ್ಪದ ಕೆ.ಹೆಚ್.ಬಿ. ಬಡಾವಣೆಯಲ್ಲಿ, ತನ್ನ ಸ್ನೇಹಿತರ ಜೊತೆಗೂಡಿ ಹೊಂಗೆ ಗಿಡಗಳನ್ನು ನೆಡುವ ಮೂಲಕ ಹಾಗೂ ತಾನು ನೆಟ್ಟ ಈ ಗಿಡಗಳನ್ನು ಬೆಳೆಸುವ ಜವಾಬ್ದಾರಿ ಹೊತ್ತಿಕೊಂಡಿದ್ದಾನೆ. ಆರ್.ಕೆ.ವೈಶಾಖ್‍ನ ಈ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ಸೂಚಿಸಿ, ಅಭಿನಂದನೆ ಸಲ್ಲಿಸಿದರು.