ದಾವಣಗೆರೆ: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರಮಝಾನ್ ಸೌಹಾರ್ದ ಸಭೆ
ದಾವಣಗೆರೆ,ಜೂ.13: ಹಬ್ಬ- ಹರಿದಿನಗಳು ಜೀವನದ ನೆಮ್ಮದಿ ಹಾಗೂ ಸಂತೋಷಕ್ಕಾಗಿ ಇರುವಂತದ್ದು, ಅಂತಹ ಆಚರಣೆ ಸೌಹಾರ್ದತವಾಗಿದ್ದರೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾದಂತೆ ಎಂದು ಎಸ್ಪಿ ಆರ್.ಚೇತನ್ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ರಮಝಾನ್ ಸೌಹಾರ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಬ್ಬಗಳ ವಾತಾವರಣ ಸೌಹಾರ್ದವಾಗಿರಬೇಕು. ದಾವಣಗೆರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಇಲಾಖೆ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆ ನಡೆಸಿದೆ. ಯಾರೊ ಕೆಲವು ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಅಂತವರನ್ನು ಶಿಕ್ಷಿಸಲು ಇಲಾಖೆ ಸಕಲ ರೀತಿ ಸಿದ್ದವಿರುತ್ತದೆ ಎಂದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗವೋ ಅಷ್ಟೇ ವೇಗವಾಗಿ ದುರುಪಯೋಗವು ಆಗುತ್ತಿವೆ. ಭಾವನಾತ್ಮಕ ವಿಚಾರಗಳ ಮೇಲೆ ಚರ್ಚೆಗಳಾಗುವುದರಿಂದ ಜನರು ಅವುಗಳನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಎಂದರು.
ಇನ್ನು ಜೂನ್‍ನಿಂದ ನವೆಂಬರವರೆಗೆ ಹಬ್ಬಗಳ ಸರಣಿ. ರಮಝಾನ್, ಗೌರಿ-ಗಣೇಶ, ದೀಪಾವಳಿ, ಬಕ್ರೀದ್ ಹೀಗೆ ಹಬ್ಬಗಳ ಸಾಲು. ಹಾಗಾಗಿ ಪ್ರತಿ ಧರ್ಮ ಜಾತಿ-ಜನಾಂಗದವರು ಅವರವರ ಹಬ್ಬಗಳನ್ನು ಎಲ್ಲರೊಂದಿಗೆ ಬೆರೆತು ಸೌಹಾರ್ದದಿಂದ ಆಚರಿಸಲು ಪೊಲೀಸ್ ಇಲಾಖೆ ಸಹಕರಿಸುತ್ತದೆಂದರು.
ಮುಖಂಡರಾದ ಸಾದಿಕ್ ಪೈಲ್ವಾನ್ ಮಾತನಾಡಿ, ಜಿಲ್ಲೆಯಲ್ಲಿ ಎಂದಿಗೂ ಯಾವ ಹಬ್ಬದ ಸಮಯದಲ್ಲೂ ಸಮಸ್ಯೆಯಾಗಿಲ್ಲ. ಹಿಂದೂ-ಮುಸಲ್ಮಾನರು ಅಣ್ಣ-ತಮ್ಮದಿರಂತೆ ಒಂದೇ ತಾಯಿಯ ಮಕ್ಕಳಂತೆ ಹಬ್ಬ ಆಚರಿಸುತ್ತಿದ್ದೇವೆ. ಒಮ್ಮೆ ಮಾತ್ರ ಗೊಂದಲದಿಂದ ಸ್ವಲ್ಪ ತೊಂದರೆಯಾಗಿದ್ದು, ಒಟ್ಟಿಗೆ ಅಂತಹ ಪರಿಸ್ಥಿತಿ ಮತ್ತೆ ಮರುಕಳಿಸಿಲ್ಲ. ಎಲ್ಲಾ ಧರ್ಮೀಯರು ಅವರವರ ಹಬ್ಬ ಆಚರಿಸಲು ಉಳಿದ ಧರ್ಮದವರ ಜೊತೆ ಸಹಕರಿಸುವ ಮೂಲಕ ದಾವಣಗೆರೆ ಭಾವೈಕ್ಯತೆಯ ನೆಲವಾಗಿದೆ ಎಂದರು. ಜಿಲ್ಲೆಯಲ್ಲಿ ಸರಿ ಸುಮಾರು 2 ಲಕ್ಷ ಮುಸಲ್ಮಾನರಿದ್ದು, ನಗರದ ನಾಲ್ಕು ಕಡೆಗಳಿಂದ ಮೆರವಣಿಗೆ ಬಂದು 3 ರುದ್ರಭೂಮಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇಲಾಖೆಯೂ ಕೂಡ ಉತ್ತಮ ಸಹಕಾರ ನೀಡುತ್ತಿದೆ ಎಂದರು.
ಶ್ರೀರಾಮ ಸೇನೆಯ ಮುಖಂಡರಾದ ಸತೀಶ್ ಪೂಜಾರಿ ಮಾತನಾಡಿ, ರಮಝಾನ್ ಶಾಂತಿಯುತವಾಗಿ ನಡೆಯಲಿ. ಧರ್ಮ ಎಂದರೆ ನ್ಯಾಯ, ನೀತಿ, ಸತ್ಯ ಧರ್ಮದಿಂದ ನಡೆದುಕೊಂಡರೆ ಯಾವುದೇ ಗೊಂದಲಗಳಾಗುವುದಿಲ್ಲ. 1991-92 ರಲ್ಲಿ ಯಾವುದೇ ಗಲಾಟೆ ಆಗಿರಲಿಲ್ಲ. ಗಣೇಶ ಉತ್ಸವ ಸಮಿತಿ ಮತ್ತು ಪೊಲೀಸರ ನಡುವಿನ ಮಾತುಕತೆಯಲ್ಲಿ ಗೊಂದಲವಾಗಿತ್ತು, ವಿನಹ ಯಾವ ಧರ್ಮದವರೂ ಬಡಿದಾಡಿಕೊಂಡಿರಲಿಲ್ಲ. ಆ ವಿಚಾರಕ್ಕೆ ಅಷ್ಟೊಂದು ಮಹತ್ವ ಕೊಡುವುದು ಬೇಡ ಎಂದರು.
ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಅಧ್ಯಕ್ಷರಾದ ಸಿರಾಜ್ ಮಾತನಾಡಿ, ಈ ತಿಂಗಳು ಮುಸಲ್ಮಾನ ಬಾಂಧವರಿಗೆ ಪವಿತ್ರವಾದ ತಿಂಗಳು. ಹಬ್ಬದಂದು ಜಿಲ್ಲಾಡಳಿತ ಮತ್ತು ಮಹಾನಗರೆ ಪಾಲಿಕೆ ಪಿ.ಬಿ ರಸ್ತೆಯಲ್ಲಿ ಸ್ವಚ್ಚತೆ, ನೀರಿನ ವ್ಯವಸ್ಥೆ ಮಾಡಬೇಕೆಂದರು. ಮುಖಂಡರಾದ ಅಮಾನುಲ್ಲಾ ಮಾತನಾಡಿದರು.
ನಗರ ಡಿ.ಎಸ್.ಪಿ ಬಾಬು ಎಲ್ಲರನ್ನು ಸಭೆಗೆ ಸ್ವಾಗತಿಸಿದರು. ಸಭೆಯಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಜಿ.ಉಮೇಶ್, ಮುಖಂಡರಾದ ರಾಮಚಂದ್ರಪ್ಪ, ಸೈಯದ್ ರಫೀಕ್, ಸಲಾಂ ಸಾಬ್, ಸುಜಾತ, ವಿಕಾಸ್ ದೇವಕರ್, ಜಾಕಿರ್ ಹುಸೇನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಗ್ರಾಮಾಂತರ ಡಿವೈಎಸ್‍ಪಿ ಎಂ ಕೆ ಗಂಗಲ್, ಹರಪನಹಳ್ಳಿ ಡಿವೈಎಸ್‍ಪಿ ನಾಗೇಶ್ ಐತಾಳ್, ದಾವಣಗೆರೆ ತಹಸೀಲ್ದಾರ್ ಯರ್ರಿಸ್ವಾಮಿ ಇದ್ದರು.