×
Ad

ದಾವಣಗೆರೆ: ಕರಡಿ ದಾಳಿ; ಇಬ್ಬರಿಗೆ ಗಾಯ

Update: 2018-06-13 22:48 IST

ದಾವಣಗೆರೆ,ಜೂ.13: ಬಹಿರ್ದೆಸೆಗೆ ತೆರಳಿದ್ದ ಓರ್ವ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಹೆಣ್ಣು ಕರಡಿಯೊಂದು ದಾಳಿ ನಡೆಸಿ, ತೀವ್ರ ಗಾಯಗೊಳಿಸಿರುವ ಘಟನೆ ಜಗಳೂರು ತಾ. ಉಚ್ಚಂಗಿಪುರ ಗ್ರಾಮದ ಹೊರ ವಲಯದಲ್ಲಿ ಬುಧವಾರ ಬೆಳಗಿನ ಜಾವ ವರದಿಯಾಗಿದೆ.

ಜಗಳೂರು ತಾ. ಉಚ್ಚಂಗಿಪುರ ಗ್ರಾಮದ ಕೆಂಚಪ್ಳರ ಶಾಂತಮ್ಮ(48) ವರ್ಷ, ಪ್ರಥಮ ಪಿಯುಸಿ ವಿದ್ಯಾರ್ಥಿ ಸಿದ್ದೇಶ(17) ವರ್ಷ ಕರಡಿ ದಾಳಿಗೊಳಗಾಗಿ, ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಿದ್ಯಾರ್ಥಿ ಸಿದ್ದೇಶ್ ಬೆಳಗಿನ ಜಾವ ಎಂದಿನಂತೆ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ ಹಿಂಭಾಗದ ಕಣದ ಹಾದಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದಾನೆ. ಈ ವೇಳೆ ಆತನ ಮೇಲೆ ಕರಡಿ ದಾಳಿ ಮಾಡಿದೆ. ಸಿದ್ದೇಶನ ತೋಳು, ಬೆನ್ನಿನ ಭಾಗಕ್ಕೆ ಕರಡಿ ತೀವ್ರವಾಗಿ ಪರಚಿದ್ದರಿಂದ ಭಯಗೊಂಡ ಸಿದ್ದೇಶ ಜೋರಾಗಿ ಕೂಗಿಕೊಂಡಿದ್ದಾನೆ. ನಂತರ ಅದೇ ದಾರಿಯಲ್ಲಿ ಬರುತ್ತಿದ್ದ ಶಾಂತಮ್ಮನ ಮೇಲೆರಗಿ, ಆಕೆಯ ಕಾಲು, ತೊಡೆ, ಪಕ್ಕೆಗೆ ತೀವ್ರವಾಗಿ ಪರಚಿದೆ. ಅಷ್ಟರಲ್ಲಿ ಸಿದ್ದೇಶ ಊರಿನತ್ತ ಓಡಿ ಹೋಗಿ, ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದು, ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಕರಡಿ ದಾಳಿಗೊಳಗಾದ ಶಾಂತಮ್ಮ, ಸಿದ್ದೇಶನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಉಚ್ಚಂಗಿಪುರ ಕೋಟೆ ಸುತ್ತಮುತ್ತಲ ಪೊದೆಗಳಲ್ಲಿ ಕರಡಿಗಾಗಿ ಶೋಧ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News